ADVERTISEMENT

ಲಾಕ್‌ಡೌನ್‌ ನಿರ್ಬಂಧ ತೆರವು: ಸರ್ಕಾರದ ಆದಾಯ ಚೇತರಿಕೆ

ವರಮಾನ ಸಂಗ್ರಹ: ಮುಂಚೂಣಿಯಲ್ಲಿ ಅಬಕಾರಿ ಇಲಾಖೆ

ಎಸ್.ರವಿಪ್ರಕಾಶ್
Published 22 ಜೂನ್ 2020, 19:15 IST
Last Updated 22 ಜೂನ್ 2020, 19:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಿಯಲ್‌ ಎಸ್ಟೇಟ್ ಕ್ಷೇತ್ರದಲ್ಲಿ ತುಸು‌ ಚೇತರಿಕೆಯ ಸೂಚನೆಗಳು ಕಾಣ ಲಾರಂಭಿಸಿದ್ದು, ಕಳೆದ 15 ದಿನಗಳಲ್ಲೇ ಗಮನಾರ್ಹ ಪ್ರಮಾಣದ ಆದಾಯ ರಾಜ್ಯದ ಬೊಕ್ಕಸಕ್ಕೆ ಬಂದಿದೆ. ಅಬಕಾರಿ ವಲಯದಿಂದ ಅತಿ ಹೆಚ್ಚು ವರಮಾನ ಬರುತ್ತಿದ್ದರೂ ಗುರಿ ತಲುಪಲು ಸಾಧ್ಯವಾಗಿಲ್ಲ.

ಕೋವಿಡ್‌–19 ಲಾಕ್‌ಡೌನ್‌ ನಿರ್ಬಂಧ ತೆರವುಗೊಳಿಸಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಭರ್ಜರಿ ಮಾರಾಟ ಶುರುವಾಗಿತ್ತು. ಕ್ರಮೇಣ ಖರೀದಿಸುವವರ ಸಂಖ್ಯೆ ಕಡಿಮೆ ಆಯಿತು.

ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಕೆ ಮಾಡಿದ ದಿನದಿಂದ ಇಲ್ಲಿಯವರೆಗೆ ಒಟ್ಟು ₹ 3,020 ಕೋಟಿ ವರಮಾನ ಬಂದಿದೆ. ನೋಂದಣಿ ಮತ್ತು ಮುದ್ರಾಂಕ ಕ್ಷೇತ್ರದಲ್ಲಿ ಒಟ್ಟು ₹900 ಕೋಟಿ ಆದಾಯ ಬಂದಿದೆ. ಅದರಲ್ಲಿ ₹430 ಕೋಟಿ ಕೇವಲ 15 ದಿನಗಳಲ್ಲೇ ಹರಿದು ಬಂದಿದೆ.

ADVERTISEMENT

ಲಾಕ್‌ಡೌನ್‌ನ ಕೆಲವು‌ ನಿಯ ಮಗಳು ಇನ್ನೂ ಜಾರಿಯಲ್ಲಿವೆ. ಒಂದು ದಿನಕ್ಕೆ ಇಂತಿಷ್ಟೇ ನೋಂದಣಿ ಎಂದು ನಿಗದಿ ಮಾಡಿ ಟೋಕನ್ ಕೊಟ್ಟು ನೋಂದಣಿ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಸ್ವತ್ತುಗಳ ನೋಂದಣಿ ಆಗುತ್ತಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಏ. 24‌ರಂದು ಲಾಕ್‌ಡೌನ್‌ ನಿಯಮ ಸಡಿಲಿಸಲಾಯಿತು. ಅಲ್ಲಿಂದ ಮೇ ಕೊನೆಯವರೆಗೂ ನೋಂದಣಿ ತೀರಾ ಮಂದಗತಿಯಲ್ಲೇ ಇತ್ತು. ಕಳೆದ 15 ದಿನಗಳಲ್ಲಿ ನೋಂದಣಿ ಪ್ರಕ್ರಿಯೆ ಚುರುಕಾಗಿದೆ. ಆಷಾಢದ ಬಳಿಕ ಚುರು ಕಾಗುವ ನಿರೀಕ್ಷೆ ಇದೆ ಎಂದು
ಹೇಳಿದರು.

ಜೂನ್ 22 ರಂದೇ (ಸೋಮವಾರ) ನೋಂದಣಿ ಮತ್ತು ಮುದ್ರಾಂಕದಿಂದ ₹46 ಕೋಟಿ ಆದಾಯ ಬಂದಿದೆ. ಪ್ರತಿ ದಿನ ಸರಾಸರಿ ₹30ಕೋಟಿಯಿಂದ ₹35 ಕೋಟಿಯಷ್ಟು ಆದಾಯ ಬರುತ್ತಿದೆ. ಶೇ 60 ಕ್ಕೂ ಹೆಚ್ಚು ಪಾಲು ಸ್ವತ್ತುಗಳ ನೋಂದಣಿಯಿಂದಲೇ ಬರುತ್ತಿದೆ ಎಂದು ಅವರು ವಿವರಿಸಿದರು.

ವಾಹನಗಳ ನೋಂದಣಿ ಚೇತರಿಕೆ

ಸಾರಿಗೆ ಇಲಾಖೆಗೆ ವಾಹನಗಳ ನೋಂದಣಿಯಿಂದ ಬರುವ ವರಮಾನದಲ್ಲೂ ಚೇತರಿಕೆಯಾಗುತ್ತಿದೆ. ಏಪ್ರಿಲ್‌ 24 ರಿಂದ ಮೇ ಕೊನೆಯ ತನಕ ಒಟ್ಟು ₹223.5 ಕೋಟಿ ಸಂಗ್ರಹವಾಗಿದೆ. ಮೇ ತಿಂಗಳೊಂದರಲ್ಲೇ ₹190 ಕೋಟಿ ವರಮಾನ ಬಂದಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.

2020–21ನೇ ಸಾಲಿಗೆ ₹6,615 ಕೋಟಿ ವರಮಾನ ನಿರೀಕ್ಷೆ ಮಾಡಲಾಗಿದೆ. ಜೂನ್‌ ತಿಂಗಳಿನಲ್ಲಿ ವಾಹನಗಳ ನೋಂದಣಿ ಜಾಸ್ತಿಯಾಗುತ್ತಿದ್ದು, ಈ ತಿಂಗಳ ಅಂತ್ಯದ ವೇಳೆಗೆ ವರಮಾನ ₹250 ಕೋಟಿ ದಾಟುವ ನಿರೀಕ್ಷೆ ಇದೆ ಎಂದರು.

ಮದ್ಯದಿಂದ ದಿನಕ್ಕೆ ₹60 ಕೋಟಿ

ಮದ್ಯ ಮಾರಾಟದಿಂದ ಪ್ರತಿ ದಿನ ₹55 ಕೋಟಿಯಿಂದ ₹60 ಕೋಟಿಯಷ್ಟು ವರಮಾನ ಸಂಗ್ರಹವಾಗುತ್ತಿದೆ. ಲಾಕ್‌ಡೌನ್‌ಗೂ ಮೊದಲೂ ಇಷ್ಟೇ ಇತ್ತು.

2020–21ನೇ ಸಾಲಿಗೆ ₹22,700 ಕೋಟಿ ವರಮಾನದ ನಿರೀಕ್ಷೆ ಇದೆ. ಲಾಕ್‌ಡೌನ್‌ನಿಂದಾಗಿ ವರಮಾನದಲ್ಲಿ ₹2,200 ಕೋಟಿ ಖೋತಾ ಆಗಿದೆ. ಅದನ್ನು ಸರಿದೂಗಿಸಲು ಮದ್ಯದ ಮೇಲಿನ ಸುಂಕಗಳ ದರವನ್ನು ಶೇ 11 ರಿಂದ ಶೇ 25 ರವರೆಗೆ ಹೆಚ್ಚಿಸಲಾಗಿತ್ತು. ನಿತ್ಯದ ಸರಾಸರಿ ಆದಾಯ ₹65 ಕೋಟಿಯಿಂದ ₹70 ಕೋಟಿಗೆ ಏರುವ ಅಂದಾಜು ಇತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆ ಆಗಿಲ್ಲ ಎಂದುಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.