ADVERTISEMENT

ಅಭ್ಯರ್ಥಿಗಾಗಿ ಬಿಜೆಪಿಯಲ್ಲಿ ಹುಡುಕಾಟ: ಬಳ್ಳಾರಿಗೆ ಲಖನ್‌ ಕರೆತರುವ ಯತ್ನ?

ಲೋಕಸಭೆ ಚುನಾವಣೆ

ಕೆ.ನರಸಿಂಹ ಮೂರ್ತಿ
Published 1 ಮಾರ್ಚ್ 2019, 20:15 IST
Last Updated 1 ಮಾರ್ಚ್ 2019, 20:15 IST
   

ಬಳ್ಳಾರಿ: ಇಲ್ಲಿನ ಲೋಕಸಭಾ ಉಪ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಿಜೆಪಿಯು, ಬರಲಿರುವ ಸಾರ್ವತ್ರಿಕ ಚುನಾವಣೆಗಾಗಿ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಕ್ಷೇತ್ರ ಮತ್ತು ಪಕ್ಷದ ಹೊರಗಿನಿಂದ ಅಭ್ಯರ್ಥಿಯನ್ನು ಕರೆತಂದರೆ ಹೇಗೆ ಎನ್ನುವ ಲೆಕ್ಕಾಚಾರದಲ್ಲಿಯೂ ಇದೆ.

ಸಚಿವ ಸತೀಶ ಜಾರಕಿಹೊಳಿ ಸಹೋದರ, ಬೆಳಗಾವಿ ಜಿಲ್ಲೆಯ ಲಖನ್‌ ಜಾರಕಿಹೊಳಿ ಅವರನ್ನು ಕಾಂಗ್ರೆಸ್‌ನಿಂದ ಕರೆ ತಂದು ಬಳ್ಳಾರಿಯಲ್ಲಿ ಕಣಕ್ಕೆ ಇಳಿಸುವ ಪ್ರಸ್ತಾಪ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜಿಲ್ಲಾ ಕೋರ್‌ ಕಮಿಟಿ ಸಭೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ಮುಂದೆ ಬಂದಿತ್ತು ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಇದು ಅನಿರೀಕ್ಷಿತ ತೀರ್ಮಾನಕ್ಕೂ ದಾರಿ ಮಾಡುವ ಸಾಧ್ಯತೆ ಇದೆ.

‘ಲಖನ್‌ ಅವರನ್ನು ಕರೆತರುವ ಪ್ರಸ್ತಾಪದ ಬಗ್ಗೆ ಏನನ್ನೂ ಹೇಳದ ಯಡಿಯೂರಪ್ಪ, ಅಭ್ಯರ್ಥಿಯ ಬಗ್ಗೆ ಸದ್ಯ ತಲೆಕೆಡಿಸಿಕೊಳ್ಳದೆ ಸಂಘಟನೆಯತ್ತ ಗಮನ ಕೊಡಲು ಸೂಚಿಸಿದರು. ಹಾಲಿ ಶಾಸಕರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು’ಎಂದು ಸಮಿತಿಯ ಸದಸ್ಯರಲ್ಲೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಶ್ರೀರಾಮುಲು ಆಸೆ: ‘ಪಕ್ಷದ ವಲಯದಲ್ಲಿ, ಕ್ಷೇತ್ರದಲ್ಲಿ ಬಾಯಿಬಿಟ್ಟು ಹೇಳದಿದ್ದರೂ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರಿಗೆ ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಆಸೆ ಇದೆ’ ಎಂಬುದು ಮೂಲಗಳ ನುಡಿ.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಉಪ ಮುಖ್ಯಮಂತ್ರಿಯಾಗುವ ಆಸೆಯಿಂದಲೇ ಶ್ರೀರಾಮುಲು ಸಂಸತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಶಾಸಕ ಹಾಗೂ ಸಂಸತ್‌ ಸದಸ್ಯ ಸ್ಥಾನಕ್ಕೆ ಪದೇ ಪದೇ ರಾಜೀನಾಮೆ ನೀಡಿದ್ದರಿಂದ ಶ್ರೀರಾಮುಲು ಕುರಿತು ಕ್ಷೇತ್ರದಲ್ಲಿ ಅಸಮಾಧಾನವಿದೆ. ಅದನ್ನು ಮೀರಿ ಗೆಲ್ಲುವ ಸಾಧ್ಯತೆ ಇದ್ದರೂ, ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಮತ್ತೆ ಸರ್ಕಾರ ರಚಿಸುವ ಉಮೇದಿನಲ್ಲಿರುವ ಬಿಜೆಪಿಯು, ತನ್ನ ಸಂಖ್ಯಾಬಲವನ್ನು ಕಡಿಮೆ ಮಾಡಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಾಧ್ಯತೆ ಇಲ್ಲ.

ಉಪ ಚುನಾವಣೆಯಲ್ಲಿ ಸೋಲುಂಡ ಶ್ರೀರಾಮುಲು ಸಹೋದರಿ ಜೆ.ಶಾಂತಾ ಕೂಡ ಟಿಕೆಟ್‌ ಆಕಾಂಕ್ಷಿ. ಆದರೆ ಬಾಯಿಬಿಟ್ಟಿಲ್ಲ. ಈ ನಡುವೆ, ಹಿಂದಿನ ವರ್ಷ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಕೂಡ್ಲಿಗಿಯಿಂದ ಆಯ್ಕೆಯಾದ ಎನ್‌.ವೈ.ಗೋಪಾಲಕೃಷ್ಣ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

ಉಗ್ರಪ್ಪಗೆ ಅವಕಾಶ:14 ವರ್ಷ ಬಿಜೆಪಿಯ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ‘ಹೊರಗಿನವರು’ ಎಂಬ ಆರೋಪದ ನಡುವೆಯೂ ವಿ.ಎಸ್‌.ಉಗ್ರಪ್ಪ ಉಪ ಚುನಾವಣೆಯ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಭರ್ಜರಿಯಾಗಿ ಗೆದ್ದರು. ನಂತರವೂ, ಕೆಪಿಸಿಸಿ ಮುಖಂಡರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯಾದಿಯಾಗಿ ‘ಉಗ್ರಪ್ಪ ಅವರೇ ಅಭ್ಯರ್ಥಿ’ ಎಂದು ಘೋಷಿಸಿದ್ದರು.

‘ಬಿಜೆಪಿಯ ಈ ಡೋಲಾಯಮಾನ ಸ್ಥಿತಿ, ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭವಾದರೂ ಅಚ್ಚರಿಪಡಬೇಕಿಲ್ಲ’ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ಪ್ರತಿಕ್ರಿಯೆಗೆ ನಕಾರ: ಲಖನ್‌ ಜಾರಕಿಹೊಳಿ, ದೂರವಾಣಿ ಕರೆ ಸ್ವೀಕರಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.