ADVERTISEMENT

ಇನ್ನೂ ತಣಿಯದ ‘ಮೈತ್ರಿ’ ಮುನಿಸು

ಇಂದು ಮತ್ತೆ ಸಭೆ ಕರೆದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 20:15 IST
Last Updated 7 ಏಪ್ರಿಲ್ 2019, 20:15 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ವರಿಷ್ಠರ ಒಮ್ಮತದ ತೀರ್ಮಾನಕ್ಕೆ ವಿರುದ್ಧವಾಗಿ ಮಂಡ್ಯ, ಹಾಸನ ಹಾಗೂ ತುಮಕೂರು ಕ್ಷೇತ್ರಗಳಲ್ಲಿ ಉಭಯ ಪಕ್ಷಗಳ ತಳಮಟ್ಟದ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಎದ್ದಿರುವ ಮುನಿಸು, ದ್ವೇಷ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ಈ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ನಡುವೆ ಸೃಷ್ಟಿಯಾಗಿರುವ ಕಂದರ ಮುಚ್ಚಲು ಕಾಂಗ್ರೆಸ್‌ ಹರಸಾಹಸ ಪಡುತ್ತಿದೆ. ಆದರೆ ನಾಯಕರ ಮಾತಿಗೆ ಕಾರ್ಯಕರ್ತರು ಸೊಪ್ಪು ಹಾಕದಿರುವುದರಿಂದ ‘ಮೈತ್ರಿ ಪಕ್ಷ’ಗಳ ಅಭ್ಯರ್ಥಿಗಳಿಗೆ ಒಳಏಟಿನ ಭೀತಿ ಎದುರಾಗಿದೆ.

ಈ ಮಧ್ಯೆ ಗೊಂದಲ ಹಾಗೂ ಅಸಮಾಧಾನ ತಣಿಸಲು ಮೈಸೂರಿನಲ್ಲಿ ಎರಡೂ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮೈತ್ರಿಧರ್ಮ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಅಸಮಾಧಾನ ಹೆಚ್ಚಿರುವ ಕ್ಷೇತ್ರಗಳ ಮುಖಂಡರ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನಿಸಿದ್ದಾರೆ. ಮೇಲ್ನೋಟಕ್ಕೆ ನಾಯಕರು ಸಂಧಾನ ಸಭೆಗೆ ಒಪ್ಪಿದಂತೆ ಮಾತನಾಡುತ್ತಿದ್ದಾರೆ. ಆದರೆ, ಕ್ಷೇತ್ರದಲ್ಲಿ ಅಭ್ಯರ್ಥಿ ಪರ ಜಂಟಿ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ.

ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮೈತ್ರಿಕೂಟ ಅಭ್ಯರ್ಥಿ ಪರ ನಿಲ್ಲಬೇಕೆಂಬ ಪಕ್ಷದ ಹೈಕಮಾಂಡ್‌ ಸೂಚನೆ ಪಾಲಿಸಲು ಮಂಡ್ಯದ ಕಾಂಗ್ರೆಸ್‌ ನಾಯಕರು ನಿರಾಕರಿಸಿದ್ದಾರೆ. ಬಿಕ್ಕಟ್ಟು ಪರಿಹರಿಸಲು ಸಚಿವ ಡಿ.ಕೆ.ಶಿವಕುಮಾರ್ 2–3 ಬಾರಿ ಸಂಧಾನ ಸಭೆ ನಡೆಸಿದರೂ ಪ್ರಯೋಜನ ಆಗಿಲ್ಲ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ನಡೆಸಿದ ಸಭೆಯಲ್ಲೂ ಒಮ್ಮತ ಮೂಡಿಲ್ಲ. ಸೋಮವಾರ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಸಿದ್ದರಾಮಯ್ಯ ಅವರ ನಿವಾಸ ‘ಕಾವೇರಿ’ ಯಲ್ಲಿ ನಡೆದ ಸಭೆಯಲ್ಲಿ ಚೆಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ ಮತ್ತಿತರ ಮಂಡ್ಯ ಜಿಲ್ಲೆಯ ಪ್ರಮುಖ ಮುಖಂಡರು ಭಾಗವಹಿಸಿದ್ದರು. ಆದರೆ, ಸಿದ್ದರಾಮಯ್ಯ ಮಾತಿಗೆ ಈ ನಾಯಕರು ಮಣಿದಿಲ್ಲ. ಕುಮಾರಸ್ವಾಮಿ ಮತ್ತು ಮಂಡ್ಯದ ಕಾಂಗ್ರೆಸ್‌ ನಾಯಕರ ಜತೆ ಮಾತುಕತೆ ನಡೆಸುವಂತೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಸೂಚಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಪದೇ ಪದೇ ಮುಖ್ಯಮಂತ್ರಿ ನಮ್ಮನ್ನು ಗುರಿ ಮಾಡುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕುವವರು ಎಂದು ಹೇಳುತ್ತಾರೆ. ನಮ್ಮನ್ನು ಹೀಗೆ ಅವಮಾನಿಸಿದರೆ ನಾವು ಯಾವ ಮುಖ ಇಟ್ಟುಕೊಂಡು ಜೆಡಿಎಸ್‌ ಪರ ಕೆಲಸ ಮಾಡಬೇಕು’ ಎಂದು ಪ್ರಶ್ನಿಸಿದ್ದಾರೆ.

‘ಕುಮಾರಸ್ವಾಮಿಗೆ ನಮ್ಮ‌ ಮೇಲೆ ನಂಬಿಕೆ ಇಲ್ಲ. ನಾವು ಮೇಲೆ ಬಿದ್ದು ಯಾಕೆ ಪ್ರಚಾರ ಮಾಡಬೇಕು. ಈಗ ಕಷ್ಟಪಟ್ಟು ಕೆಲಸ ಮಾಡುತ್ತೇವೆ. ಚುನಾವಣೆಯಲ್ಲಿ ಗೆದ್ದ ಮೇಲೆ ನಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಾರಾ. ಅವರು ನಮ್ಮ ಪರವಾಗಿ ಏನೂ ಕೆಲಸ ಮಾಡಿಲ್ಲ. ಜನ ನಮ್ಮನ್ನು ಆರಿಸಿ ಕಳಿಸಿದ್ದಾರೆ ಎಂದು ಗೂಬೆ ಕೂರಿಸುತ್ತಾರೆ. ನಾವ್ಯಾಕೆ ಕೆಲಸ ಮಾಡಬೇಕು’ ಎಂದು ಚೆಲುವರಾಯಸ್ವಾಮಿ ಅವರು ಸಿದ್ದರಾಮಯ್ಯ ಬಳಿ ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ. ಅದಕ್ಕೆ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಹೆಚ್ಚು ಸೀಟು ಗೆಲ್ಲಬೇಕಿದೆ. ಎಲ್ಲ ಕಡೆ ಗೆಲ್ಲುವ ಉತ್ತಮ ಅವಕಾಶ
ವಿದೆ. ಹೈಕಮಾಂಡ್ ಸೂಚನೆ ಪಾಲಿಸಲೇಬೇಕಿದೆ. ಹೀಗಾಗಿ ತಾಳ್ಮೆಯಿಂದ ವರ್ತಿಸಿ. ಸಿ.ಎಂ ಜೊತೆ ಚರ್ಚಿಸುತ್ತೇನೆ’ ಎಂದು ಕಿವಿಮಾತು ಹೇಳಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಚೆಲುವರಾಯಸ್ವಾಮಿ, ‘ನಮ್ಮ ಮೇಲೆ ಸಿದ್ದರಾಮಯ್ಯ ಅವಲಂಬಿತರಾಗಿದ್ದಾರೆ. ನಾವು ನಮ್ಮ ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರನ್ನು ಅವಲಂಬಿಸಿದ್ದೇವೆ. ಸಿದ್ದರಾಮಯ್ಯ ಕೊಟ್ಟಿರುವ ಸೂಚನೆಗಳ ಬಗ್ಗೆ ಕಾರ್ಯಕರ್ತರ ಜೊತೆಗೆ ಚರ್ಚಿಸಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಬಗ್ಗೆ ತೀರ್ಮಾನಿಸುತ್ತೇವೆ’ ಎಂದೂ ಹೇಳಿದರು.‌

ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಬಲಿಸುವುದಿಲ್ಲ ಎಂದು ಅದೇ ಪಕ್ಷದ ಶಾಸಕ ಕೆ.ಆರ್. ರಮೇಶ್‍ಕುಮಾರ್ ಬೆಂಬಲಿಗರು ಹೇಳಿದ್ದಾರೆ. ಉತ್ತರಕನ್ನಡ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಆನಂದ್ ಅಸ್ನೋಟಿಕರ್‍ ಅವರನ್ನು ಬೆಂಬಲಿಸುವ ಬಗ್ಗೆ ಕಾಂಗ್ರೆಸ್‌ನಲ್ಲಿ ವಿರೋಧ ವ್ಯಕ್ತವಾಗಿದೆ. ಸಚಿವ ಆರ್.ವಿ.ದೇಶಪಾಂಡೆ ಮತ್ತು ಅವರ ಬೆಂಬಲಿಗರು ಪೂರ್ಣ ಪ್ರಮಾಣದಲ್ಲಿ ಬೆಂಬಲ ಸೂಚಿಸುತ್ತಿಲ್ಲ. ಧಾರವಾಡದಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಐ.ಜಿ.ಸನದಿ ಮತ್ತು ಅವರ ಬೆಂಬಲಿಗರು ಮುನಿಸಿಕೊಂಡಿದ್ದಾರೆ. ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ಅವರು ತಟಸ್ಥವಾಗಿರುವುದು, ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆಯೇ ಎಂಬ ಚರ್ಚೆಗೆ ಗ್ರಾಸವಾಗಿದೆ.‌ ರಮೇಶ ನಿಲುವಿನಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಅವರು ಪ್ರತಿನಿಧಿಸುವ ಗೋಕಾಕದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ.

***

ಮಂಡ್ಯ, ಮೈಸೂರು, ಹಾಸನದ ಕೆಲವು ಕಡೆ ಎರಡೂ ಪಕ್ಷದಲ್ಲಿ ಸಮಸ್ಯೆಗಳಿವೆ. ಆದರೆ, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ.

–ಕೆ.ಸಿ. ವೇಣುಗೋಪಾಲ್‌, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ

ಒಡಕಿಲ್ಲದ ರೀತಿ ಎರಡೂ ಪಕ್ಷದವರು ಜವಾಬ್ದಾರಿಯಿಂದ ನಡೆದುಕೊಂಡರೆ ಹೆಚ್ಚು ಸ್ಥಾನ ಗೆಲ್ಲಬಹುದು. ಇಲ್ಲದೇ ಇದ್ದರೆ ಮೈತ್ರಿ ಗುರಿ ಸಾಧನೆ ಕಷ್ಟ.

–ಎಚ್.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.