ADVERTISEMENT

ಲೋಕಸಭೆ ಚುನಾವಣೆ: ಕುಕ್ಕರ್‌ ತಯಾರಿಕಾ ಕಂಪನಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 15:49 IST
Last Updated 30 ಮಾರ್ಚ್ 2024, 15:49 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಮತದಾರರಿಗೆ ಆಮಿಷ ಒಡ್ಡಲು ರಾಜಕಾರಣಿಗಳಿಗೆ ಪ್ರೆಷರ್‌ ಕುಕ್ಕರ್‌ ಪೂರೈಸಿರುವ ಅನುಮಾನದ ಮೇಲೆ ರಾಮನಗರ ಹಾರೋಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ರೆಷರ್‌ ಕುಕ್ಕರ್‌ ತಯಾರಿಕಾ ಕಂಪನಿಯೊಂದಕ್ಕೆ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಈ ಕಂಪನಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏಳು ದಾಸ್ತಾನು ಕೇಂದ್ರಗಳನ್ನು ಹೊಂದಿದೆ. ಕೆಲವು ತಿಂಗಳುಗಳಿಂದ ತಯಾರಿಸಿರುವ ಕುಕ್ಕರ್‌ಗಳ ಸಂಖ್ಯೆ, ಸಗಟು ಖರೀದಿದಾರರ ವಿವರ ಒದಗಿಸುವಂತೆ ಐ.ಟಿ ಅಧಿಕಾರಿಗಳು ಸೂಚಿಸಿದ್ದಾರೆ. ಬೆಂಗಳೂರಿನ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಹಾಲಿ ಸಂಸದ ಡಿ.ಕೆ.ಸುರೇಶ್‌, ಅವರ ಸಹೋದರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತದಾರರಿಗೆ ಕುಕ್ಕರ್‌ ಹಂಚುತ್ತಿದ್ದಾರೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದು, ಕ್ರಮಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು.

ಆಯೋಗದ ಸೂಚನೆಯಂತೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಈ ಕಂಪನಿ ವಿರುದ್ಧ ದೂರುಗಳಿದ್ದವು. ಆ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ದಾಳಿಮಾಡಿ, ಶೋಧ ನಡೆಸಿದ್ದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.