ADVERTISEMENT

ವಿಧಾನಮಂಡಲಗಳಲ್ಲಿ ಚರ್ಚೆ, ಭಿನ್ನಮತ ಇರಲಿ; ಘನತೆಯೂ ಇರಲಿ: ಓಂ ಬಿರ್ಲಾ

ಶಾಸನಸಭೆ ಕಲಾಪದ ಗುಣಮಟ್ಟದ ಬಗ್ಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 22:27 IST
Last Updated 24 ಸೆಪ್ಟೆಂಬರ್ 2021, 22:27 IST
ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಶಾಸಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇದ್ದಾರೆ.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಶಾಸಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇದ್ದಾರೆ.   

ಬೆಂಗಳೂರು: ‘ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ವಿರೋಧ, ಭಿನ್ನಮತ, ತರ್ಕ, ವಾಗ್ವಾದ, ಚರ್ಚೆ ಎಲ್ಲವೂ ಇರಬೇಕು. ಅದುವೇ ಪ್ರಜಾಪ್ರಭುತ್ವದ ಅಂತಃಸತ್ವ. ಆದರೆ, ಕಲಾಪಗಳಿಗೆಅಡ್ಡಿಪಡಿಸುವುದು ಜನತೆಯ ಆಶೋತ್ತರಗಳಿಗೆ ಮಾಡುವ ಅಪಚಾರ’ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ವ್ಯಾಖ್ಯಾನಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ವಿಧಾನಸಭೆಯಲ್ಲಿ ಏರ್ಪಡಿಸಿದ್ದ ‘ಪ್ರಜಾಪ್ರಭುತ್ವ: ಸಂಸದೀಯ ಮೌಲ್ಯಗಳ ರಕ್ಷಣೆ’ ವಿಷಯ ಮೇಲೆ ಅವರು ಮಾತನಾಡಿದರು.

‘ಕಲಾಪಗಳು ನಿಯಮಗಳಿಗೆ ಅನುಗುಣವಾಗಿ ಗೌರವ, ಘನತೆಯಿಂದ ನಡೆದಾಗ ಪ್ರಜಾಪ್ರಭುತ್ವ ಹೆಚ್ಚು ಪರಿಪಕ್ವತೆಯತ್ತ ಮುನ್ನಡೆಯಲು ಸಾಧ್ಯ. ಸದಸ್ಯರು ಶಿಸ್ತಿನ ನಡವಳಿಕೆಯಿಂದ ಸಭೆಯ ಘನತೆ ಎತ್ತಿ ಹಿಡಿಯಬೇಕು. ಖಾಸಗಿ ಜೀವನದಲ್ಲೂ ಅವರ ನಡತೆಗಳು ಮತ್ತು ವ್ಯವಹಾರಗಳು ಉತ್ತಮವಾಗಿದ್ದಾಗ ಸದನದ ಘನತೆ ಹೆಚ್ಚಿಸಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಕಲಾಪದ ವೇಳೆ ಉಂಟಾಗುವ ಅಡಚಣೆಗಳಿಂದ ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಇರುವ ಅವಕಾಶಗಳನ್ನು ಕಸಿದು ಕೊಳ್ಳುತ್ತವೆ. ಚರ್ಚೆಗಳಲ್ಲಿ ಎಲ್ಲರೂ ಪರಸ್ಪರ ಸೌಜನ್ಯ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು. ಸದೃಢ ಪ್ರಜಾಪ್ರಭುತ್ವಕ್ಕಾಗಿ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಉಳಿಸಿಕೊಳ್ಳುವುದು ಅಗತ್ಯ. ಈ ದಿಸೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ವಿಸ್ತೃತ ಚರ್ಚೆ ನಡೆಸಬೇಕು ಎಂದು ಓಂ ಬಿರ್ಲಾ ಸಲಹೆ ನೀಡಿದರು.

ಭಾಷಣದ ಪ್ರಮುಖ ಅಂಶಗಳು
* ಭಾರತ ಬಹುಪಕ್ಷಗಳ ಸಂಸದೀಯ ವ್ಯವಸ್ಥೆ ಅಳವಡಿಸಿಕೊಂಡಿದೆ. ವಿಭಿನ್ನ ವಿಚಾರಧಾರೆಗಳು, ಸಿದ್ಧಾಂತಗಳನ್ನು ಒಳಗೊಂಡ ದೇಶ. ಪ್ರಜಾಪ್ರಭುತ್ವದ ಸಂಸ್ಥೆಗಳ ಮೂಲಕ ಜನರ ಸೇವೆಯಲ್ಲಿ ಎಲ್ಲ ವಿಚಾರ ಧಾರೆಯವರೂ ಕೆಲಸ ಮಾಡಲು ಸಾಧ್ಯ.

* ಈವರೆಗೆ ಅನುಸರಿಸಿದ ಸಂಸದೀಯ ವ್ಯವಸ್ಥೆಯ ಪಾಲನೆಯಲ್ಲಿ ಪ್ರಜಾ ತಂತ್ರದ ಮೌಲ್ಯಗಳನ್ನು ಕಾಪಾಡುವಲ್ಲಿ, ಪ್ರಜಾತಂತ್ರದ ಸಂಸ್ಥೆಗಳನ್ನು ಹೆಚ್ಚು ಜವಾಬ್ದಾರಿಯುತಗೊಳಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂಬ ಚಿಂತನೆ ಆಗಬೇಕು.

*ನಮ್ಮ ಪ್ರಜಾಪ್ರಭುತ್ವ ಜನಕೇಂದ್ರಿತ ವಾಗಿದ್ದು, ಇದರ ನಿರ್ಮಾತೃಗಳು ಸಂವಿಧಾನ ರೂಪಿಸುವಾಗ ಜನರ ಹಿತವನ್ನೇ ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡಿದ್ದರು.

ಆತ್ಮಾವಲೋಕನಕ್ಕೆ ಸಕಾಲ: ಕಾಗೇರಿ
‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಮಾಧ್ಯಮ ಕ್ಷೇತ್ರವೂ ಆದರ್ಶ ಮತ್ತು ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು.

‘ಸರ್ಕಾರ ಮತ್ತು ಶಾಸಕಾಂಗದ ಬಗ್ಗೆ ಬೊಟ್ಟು ಮಾಡಿ ತೋರಿಸುವ ಕೆಲಸ ಆಗುತ್ತಿದೆ. ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ಕ್ಷೇತ್ರಗಳೂ ಹೇಗಿವೆ, ಯಾವ ಹಂತ ತಲುಪಿವೆ ಎಂಬ ಸ್ವಯಂ ಚಿಂತನೆ ಮಾಡಿಕೊಳ್ಳಲಿ. ಇದಕ್ಕೆ ಶಾಸಕಾಂಗವೇ ಮುನ್ನುಡಿ ಹಾಡಬೇಕು’ ಎಂದರು.

‘ವಿಶ್ವದಲ್ಲೇ ಅತ್ಯುತ್ತಮ ಪ್ರಜಾಪ್ರಭುತ್ವದ ವ್ಯವಸ್ಥೆ ನಮ್ಮದು. ಇಂತಹ ವ್ಯವಸ್ಥೆ ರೂಪುಗೊಳ್ಳಲು ಡಾ.ಅಂಬೇಡ್ಕರ್‌ ಅವರನ್ನು ನೆನಪಿಸಿಕೊಳ್ಳಬೇಕು’ ಎಂದು ಹೇಳಿದರು.

ಕಲಾಪ ಗುಣಮಟ್ಟ ಕುಸಿತ
‘ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ಕಲಾಪದ ಗುಣಮಟ್ಟ ಕುಸಿದು ಹೋಗಿದೆ. ಇದರಿಂದ ಉತ್ತಮ ಚರ್ಚೆ ಸಾಧ್ಯವಾಗುತ್ತಿಲ್ಲ. ಮಸೂದೆಗಳನ್ನು ಚರ್ಚೆ ನಡೆಸದೇ ಅಂಗೀಕರಿಸಲಾಗುತ್ತಿದೆ’ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

‘ಹಿಂದೆಲ್ಲ ಸುಗ್ರೀವಾಜ್ಞೆಗಳನ್ನು ಅಪರೂಪಕ್ಕೆ ತರಲಾಗುತ್ತಿತ್ತು. ಈಗ ಎಲ್ಲದಕ್ಕೂ ಸುಗ್ರೀವಾಜ್ಞೆ ಹೊರಡಿಸ ಲಾಗುತ್ತಿದೆ. ಹಿಂದೊಮ್ಮೆವಿಧಾನಪರಿಷತ್ತಿನಲ್ಲಿ ಅರ್ಧ ಗಂಟೆಯಲ್ಲಿ 22 ಮಸೂದೆಗಳನ್ನು ಅಂಗೀಕಾರ ಮಾಡಲಾಗಿತ್ತು. ಈಗಲೂ ಆ ಪರಂಪರೆ ಮುಂದುವರಿದಿದೆ’ ಎಂದೂ ಬೇಸರ ವ್ಯಕ್ತಪಡಿಸಿದರು.

ಬಿರ್ಲಾ ಭಾಷಣಕ್ಕೆ ಕಾಂಗ್ರೆಸ್‌ ಬಹಿಷ್ಕಾರ: ಹಿಂದಿಗೆ ಅನ್ನದಾನಿ ವಿರೋಧ
ಓಂ ಬಿರ್ಲಾ ಅವರ ಭಾಷಣಕ್ಕೆ ಕಾಂಗ್ರೆಸ್‌ ಬಹಿಷ್ಕಾರ ಹಾಕಿತ್ತು. ಆದರೆ, ಜೆಡಿಎಸ್ ಸದಸ್ಯರು ಭಾಗವಹಿಸಿದ್ದರು.

ವಿಧಾನಸಭೆಯೊಳಗೆ ಭಾಷಣ ಮಾಡಲು ಅವಕಾಶ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್‌ ಸದಸ್ಯರು ಕಲಾಪದಿಂದ ಹೊರಗುಳಿದು ಪ‍್ರತಿಭಟನೆ ತೋರಿದರು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಭಾಧ್ಯಕ್ಷ ಕಾಗೇರಿ, ‘ಕಾಂಗ್ರೆಸ್‌ ಸದಸ್ಯರಿಗೆ ಆಹ್ವಾನ ನೀಡಿದ್ದೆವು. ಅವರದೇ ಕಾರಣಗಳಿಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು’ ಎಂಬ ಆಶಯ ವ್ಯಕ್ತಪಡಿಸಿದರು.

ಓಂ ಬಿರ್ಲಾ ಹಿಂದಿಯಲ್ಲಿ ಭಾಷಣ ಓದಿದ್ದನ್ನು ಪ್ರತಿಭಟಿಸಿ ಜೆಡಿಎಸ್‌ನ ಕೆ. ಅನ್ನದಾನಿ ಕನ್ನಡ ಬಾವುಟ ಪ್ರದರ್ಶಿಸಿ ವಿರೋಧ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.