ADVERTISEMENT

ಕಾಮಗಾರಿ ನಡೆಸದೆ ₹250 ಕೋಟಿ ಬಿಲ್‌ ಪಾವತಿ?: ಜಿಬಿಎ ಕಚೇರಿಯಲ್ಲಿ ಲೋಕಾಯುಕ್ತ ಶೋಧ

ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದೆ ಬಿಲ್ ಪಾವತಿಸಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 15:56 IST
Last Updated 11 ನವೆಂಬರ್ 2025, 15:56 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಂಗಳೂರು: ರಾಜರಾಜೇಶ್ವರಿನಗರದ ವಿವಿಧ ವಾರ್ಡ್‌ಗಳಲ್ಲಿ ಕಾಮಗಾರಿ ನಡೆಸದೆಯೇ ₹250 ಕೋಟಿ ಬಿಲ್‌ ಪಾವತಿ ಮಾಡಿದ ಪ್ರಕರಣದ ಸಂಬಂಧ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ಶೋಧ ನಡೆಸಿದ್ದಾರೆ.

‘2019–20, 2020–21ರ ಅವಧಿಯಲ್ಲಿ ಕಾಮಗಾರಿಗಳನ್ನು ನಡೆಸದೆಯೇ ಬಿಲ್ ಪಾವತಿ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ’ ಎಂದು 2021ರಲ್ಲಿ ಸಂಸದರಾಗಿದ್ದ ಡಿ.ಕೆ.ಸುರೇಶ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆ ದೂರಿನ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು, ಒಟ್ಟು ₹148 ಕೋಟಿಯಷ್ಟು ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.

ADVERTISEMENT

ತನಿಖೆಯ ಮುಂದುವರೆದ ಭಾಗವಾಗಿ ಮಂಗಳವಾರ ಜಿಬಿಎ ಕೇಂದ್ರ ಕಚೇರಿಯಲ್ಲಿರುವ ಎಂಜಿನಿಯರಿಂಗ್‌ ವಿಭಾಗದ, ವಿವಿಧ ಎಂಜಿನಿಯರ್‌ಗಳ ಕಚೇರಿ ಮತ್ತು ನಿವೃತ್ತ ಎಂಜಿನಿಯರ್‌ಗಳ ಮನೆ ಸೇರಿ 13 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.

‘ದೂರುದಾರರು ದೂರಿನ ಜತೆಯಲ್ಲಿಯೇ ಹಲವು ದಾಖಲೆ ಪತ್ರಗಳನ್ನು ನೀಡಿದ್ದರು. ಅವುಗಳನ್ನು ಮರುಪರಿಶೀಲಿಸಿಕೊಳ್ಳಲಾಗಿದೆ. 2019–21ರ ಎರಡು ಆರ್ಥಿಕ ವರ್ಷದಲ್ಲಿ, ರಾಜರಾಜೇಶ್ವರಿನಗರ ವ್ಯಾಪ್ತಿಯ ಆರು ವಾರ್ಡ್‌ಗಳಲ್ಲಿ ನಡೆದಿರುವ ಕಾಮಗಾರಿಗಳ ಮೂಲ ದಾಖಲೆಗಳನ್ನು ಕಲೆಹಾಕಲಾಗುತ್ತಿದೆ’ ಎಂದು ಲೋಕಾಯಕ್ತ ಎಸ್‌ಪಿ ಶಿವಪ್ರಕಾಶ್‌ ದೇವರಾಜು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಆ ಅವಧಿಯಲ್ಲಿ ನಡೆಸಲಾಗಿದೆ ಎನ್ನಲಾದ ರಸ್ತೆ ನಿರ್ಮಾಣ ಮತ್ತು ರಿಪೇರಿ, ಪಾದಚಾರಿ ಮಾರ್ಗ, ಚರಂಡಿ ನಿರ್ಮಾಣ ಹಾಗೂ ಚರಂಡಿಯ ಹೂಳೆತ್ತುವ ಕಾಮಗಾರಿಗಳ ಟೆಂಡರ್‌ ದಾಖಲೆ, ಸಲ್ಲಿಕೆಯಾದ ಟೆಂಡರ್‌ಗಳು, ಗುತ್ತಿಗೆ ಅವಾರ್ಡ್‌ ಪತ್ರಗಳು, ಕಾಮಗಾರಿ ಪ್ರಗತಿ ವರದಿಗಳು ಮತ್ತು ಬಿಲ್‌ ಪಾವತಿ ವಿವರಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಸಂಗ್ರಹಿಸಲಾಗಿದೆ’ ಎಂದು ತಿಳಿಸಿದರು.

‘ಈ ಪ್ರಕರಣದಲ್ಲಿ ಒಂಬತ್ತು ನೌಕರರು ಮತ್ತು ಅಧಿಕಾರಿಗಳ ವಿರುದ್ಧ ಆರೋಪವಿದೆ. ಕೆಲವರು ನಿವೃತ್ತರಾಗಿದ್ದು, ಅವರ ಮನೆಗಳಲ್ಲೂ ಶೋಧಕಾರ್ಯ ನಡೆಸಲಾಗಿದೆ. ಅಗತ್ಯ ಎನಿಸಿದರೆ ಅಧಿಕಾರಿಗಳನ್ನು ವಿಚಾರಣೆಗೆ ಕರೆಯಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.