ಟಿ.ಡಿ. ರಾಜೇಗೌಡ
ಚಿಕ್ಕಮಗಳೂರು: ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ವಿರುದ್ಧ ವಾರದ ಹಿಂದೆ ಎಫ್‌ಐಆರ್ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು, ಮಂಗಳವಾರ ಅವರ ಮನೆ, ಫಾರಂ ಹೌಸ್ ಸೇರಿ ನಾಲ್ಕು ಕಡೆ ಶೋಧ ಆರಂಭಿಸಿದ್ದಾರೆ.
ಕೊಪ್ಪ ನಿವಾಸಿ ದಿನೇಶ್ ಎಚ್.ಕೆ. ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. ರಾಜೇಗೌಡ, ಪತ್ನಿ ಡಿ.ಕೆ. ಪುಷ್ಪಾ, ಪುತ್ರ ರಾಜ್‌ದೇವ್ ಟಿ.ಆರ್. ವಿರುದ್ಧ ಸೆ.23ರಂದು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಮಂಗಳವಾರ ಬೆಳಿಗ್ಗೆಯೇ ಖಾಂಡ್ಯ ಹೋಬಳಿ ಬಸಾಪುರ ಗ್ರಾಮದಲ್ಲಿರುವ ರಾಜೇಗೌಡ ಅವರ ನಿವಾಸಕ್ಕೆ ತೆರಳಿರುವ ಅಧಿಕಾರಿಗಳು, ದಾಖಲೆಗಳ ಸಂಗ್ರಹಕ್ಕೆ ಶೋಧ ನಡೆಸುತ್ತಿದ್ದಾರೆ.
‘ಬೆಂಗಳೂರಿನಲ್ಲಿ ಸಂಬಂಧಿಕರ ಮನೆ ಮತ್ತು ಅವರ ಫಾರಂ ಹೌಸ್ ಸೇರಿ ನಾಲ್ಕು ಕಡೆ ಶೋಧ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಟಿ.ಡಿ. ರಾಜೇಗೌಡ ಅವರು ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಜತೆಗೆ ಸರ್ಕಾರಕ್ಕೆ ಮತ್ತು ಆದಾಯ ತೆರಿಗೆ ಇಲಾಖೆಗೆ ವಂಚನೆ ಮಾಡಿದ್ದಾರೆ. ಅವರ ವಿರುದ್ಧ ಸಮಗ್ರ ತನಿಖೆ ನಡೆಸಬೇಕು’ ಎಂದು ದಿನೇಶ್ ಎಚ್.ಕೆ. ದೂರಿನಲ್ಲಿ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಸೆ.16ರಂದು ಆದೇಶ ನೀಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಸೂಚಿಸಿತ್ತು.
‘ರಾಜೇಗೌಡ ಅವರ ಕುಟುಂಬ ಸದಸ್ಯರು ತಮ್ಮ ಆದಾಯ ಮೂಲಗಳಿಗೆ ತಾಳೆಯಾಗದಷ್ಟು ಆಸ್ತಿ ಸಂಪಾದಿಸಿದ್ದಾರೆ. ಅವರ ಪಾಲುದಾರಿಕೆ ಸಂಸ್ಥೆಯಾದ ಮೆ.ಶಬಾನಾ ರಂಜಾನ್‌ನ ವ್ಯವಹಾರಗಳು ಸಾಕ್ಷಿ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
‘ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ಗೆ ₹55.75 ಕೋಟಿ, ಬ್ಯಾಂಕ್ ಆಫ್ ಬರೋಡಾಗೆ ₹66 ಕೋಟಿ ಹಾಗೂ ಕರ್ನಾಟಕ ಬ್ಯಾಂಕ್‌ಗೆ ₹81.95 ಲಕ್ಷ ಮರು ಪಾವತಿ ಮಾಡಲಾಗಿದೆ. ಆದರೆ, ಲೋಕಾಯುಕ್ತಕ್ಕೆ ರಾಜೇಗೌಡರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಾರ್ಷಿಕ ಆದಾಯ ಕೇವಲ ₹40 ಲಕ್ಷ ಎಂದು ಘೋಷಿಸಿದ್ದಾರೆ’ ಎಂಬುದು ದೂರುದಾರರ ಆರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.