ADVERTISEMENT

ಬೀಸೊ ದೊಣ್ಣೆಯಿಂದ ಪಾರಾದ ಶ್ರೀರಾಮುಲು?

ಭೂಕಬಳಿಕೆ ಆರೋಪ ಪ್ರಕರಣ: ವಿಧಾನಸಭಾಧ್ಯಕ್ಷರ ಕೈಯಲ್ಲಿ ಭವಿಷ್ಯ

ಹೊನಕೆರೆ ನಂಜುಂಡೇಗೌಡ
Published 19 ಸೆಪ್ಟೆಂಬರ್ 2019, 19:36 IST
Last Updated 19 ಸೆಪ್ಟೆಂಬರ್ 2019, 19:36 IST
ಶ್ರೀರಾಮುಲು
ಶ್ರೀರಾಮುಲು   

ಬೆಂಗಳೂರು:‘ಭೂ ಕಬಳಿಕೆ ಆರೋಪಕ್ಕೆ ಒಳಗಾಗಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡಬೇಕು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಲೋಕಾಯುಕ್ತ ಪೊಲೀಸರು ಮತ್ತೊಂದು ಪತ್ರ ಬರೆದಿದ್ದಾರೆ.

ಇದರಿಂದಾಗಿ ಸಚಿವರು ಸದ್ಯಕ್ಕೆ ನಿರಾಳರಾಗಿದ್ದಾರೆ.‘ಶ್ರೀರಾಮುಲು ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಪ್ರಕ್ರಿಯೆ ಆರಂಭಿಸಬಹುದು. ಇದಕ್ಕೆ ಸಕ್ಷಮ ಪ್ರಾಧಿಕಾರದ (ಸ್ಪೀಕರ್‌) ಅನುಮತಿ ಅಗತ್ಯವಿಲ್ಲ’ ಎಂದು ರಾಜ್ಯದ ಈ ಹಿಂದಿನ ಅಡ್ವೊಕೇಟ್‌ ಜನರಲ್‌ ಉದಯ್ ಹೊಳ್ಳ ಜೂನ್‌ 27 ರಂದು ಅಭಿಪ್ರಾಯ ನೀಡಿದ್ದರು. ತಮ್ಮ ಈ ಅಭಿಪ್ರಾಯಕ್ಕೆ ಪೂರಕವಾಗಿ ಸುಪ್ರೀಂ ಕೋರ್ಟಿನ ಕೆಲವು ತೀರ್ಪನ್ನು ಉಲ್ಲೇಖಿಸಿದ್ದರು. 2018ರ ಸೆಪ್ಟೆಂಬರ್‌ 26 ರಂದೂ ಇದೇ ಅಭಿಪ್ರಾಯ ಕೊಟ್ಟಿದ್ದರು.

ಹೊಳ್ಳ ಅವರ ಈ ಅಭಿಪ್ರಾಯವನ್ನು ವಿಧಾನಸಭೆಯ ಹಿಂದಿನ ಅಧ್ಯಕ್ಷರು ಆಗಸ್ಟ್‌ ಮೊದಲ ವಾರ ಲೋಕಾಯುಕ್ತ ಎಡಿಜಿಪಿಗೆ ಕಳುಹಿಸಿತ್ತು.ಆದರೆ, ಈ ಅಭಿಪ್ರಾಯ ಒಪ್ಪದ ಲೋಕಾಯುಕ್ತ ಕಾನೂನು ವಿಭಾಗವು, ‘ಯಾವುದೇ ಸರ್ಕಾರಿ ನೌಕರನ ವಿರುದ್ಧ ಕ್ರಮ ಕೈಗೊಳ್ಳಬೇಕಾದರೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್‌ 19ರ ಪ್ರಕಾರ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ’ ಎಂಬ ನಿಲುವು ತಳೆದಿದೆ.

ADVERTISEMENT

ಹಿಂದಿನ ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ನೀಡಿದಾಗ ರಾಮುಲು ಶಾಸಕರಾಗಿದ್ದರು. ಈಗ ಬಿ.ಎಸ್‌. ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಸಚಿವರ ವಿರುದ್ಧ ಕಾನೂನು ಪ್ರಕ್ರಿಯೆಗೆ ಒಪ್ಪಿಗೆ ನೀಡುವಂತೆ ಕೇಳಿ ಲೋಕಾಯುಕ್ತ ಪೊಲೀಸರಿಂದ ಪತ್ರ ಬಂದಿರುವುದನ್ನು ವಿಧಾನಸಭಾಧ್ಯಕ್ಷರ ಕಚೇರಿಯ ಮೂಲಗಳು ಖಚಿತಪಡಿಸಿವೆ. ಹೀಗಾಗಿ, ರಾಮುಲು ಅವರ ಭವಿಷ್ಯ ಸದ್ಯಕ್ಕೆ ಕಾಗೇರಿ ಅವರ ಕೈಯಲ್ಲಿದೆ.

ಪ್ರಕರಣವೇನು?: ಬಳ್ಳಾರಿ ತಿಲಕ್‌ನಗರ ನಿವಾಸಿ ಜಿ. ಕೃಷ್ಣಮೂರ್ತಿ ಎಂಬುವರು ಶ್ರೀರಾಮುಲು ವಿರುದ್ಧ ಭೂ ಕಬಳಿಕೆ ಆರೋಪ ಮಾಡಿ 2013ರಲ್ಲಿ ಬಳ್ಳಾರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಡಿ. ವಿಶ್ವೇಶ್ವರ ಭಟ್‌ ಅವರು ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸಿದ್ದರು.

ಕೋರ್ಟ್‌ ಆದೇಶ ನೀಡಿ ಆರು ವರ್ಷ ಕಳೆದರೂ ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳಿಸದೆ ಕಾಲಹರಣ ಮಾಡುತ್ತಿದ್ದಾರೆ. ವಿಧಾನಸಭಾಧ್ಯಕ್ಷರ ಕಚೇರಿಗೆ ಅನಗತ್ಯವಾಗಿ ಪತ್ರ ಬರೆದು ಅನುಮತಿ ನೀಡುವಂತೆ ಕೇಳುತ್ತಿದ್ದಾರೆ ಎಂಬ ಟೀಕೆಗಳೂ ವ್ಯಕ್ತವಾಗುತ್ತಿವೆ.

‘ನಾವು ನಿಯಮದ ಪ್ರಕಾರ ಕೆಲಸ ಮಾಡುತ್ತೇವೆ. ನಿಯಮ ಉಲ್ಲಂಘಿಸಿದರೆ ಪ್ರಕರಣದ ಮೇಲೆ ಅಡ್ಡ ಪರಿಣಾಮ ಆಗಬಹುದು. ಇದರಿಂದಾಗಿ ನಿಯಮಗಳನ್ನು ಪಾಲಿಸಲಾಗುತ್ತಿದೆ’ ಎಂದು ಲೋಕಾಯುಕ್ತ ಮೂಲಗಳು ಸ್ಪಷ್ಟಪಡಿಸಿವೆ.

***

ಲೋಕಾಯುಕ್ತ ಪೊಲೀಸರು ಪತ್ರ ಬರೆದಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ದಾಖಲೆ ತರಿಸಿಕೊಂಡು ಪರಿಶೀಲಿಸುತ್ತೇನೆ.

- ವಿಶ್ವೇಶ್ವರ ಹೆಗಡೆ ಕಾಗೇರಿ,ವಿಧಾನಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.