ಕರ್ನಾಟಕ ಲೋಕಾಯುಕ್ತ
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಹೆಸರಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ, ಲೋಕಾಯುಕ್ತ ಎಸ್‌ಪಿಯಾಗಿದ್ದ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿ ಅವರನ್ನು ಮಂಗಳವಾರ ವಿಚಾರಣೆ ನಡೆಸಲಾಗಿದೆ.
ಹೈಕೋರ್ಟ್‌ನ ಆದೇಶದ ನಂತರ ಲೋಕಾಯುಕ್ತ ಪೊಲೀಸ್‌ನ ತನಿಖಾಧಿಕಾರಿ, ಡಿವೈಎಸ್‌ಪಿ ತಿಪ್ಪೇಸ್ವಾಮಿ ಅವರು ಶ್ರೀನಾಥ್ ಅವರಿಗೆ ನೋಟಿಸ್ ನೀಡಿದ್ದರು. ಹತ್ತು ದಿನಗಳ ಒಳಗೆ ವಿಚಾರಣೆಗೆ ಹಾಜರಾಗಿ ಎಂದು ಸೂಚಿಸಿದ್ದರು. ಅದರಂತೆ ಶ್ರೀನಾಥ್ ಅವರು ಮಂಗಳವಾರ ಬೆಳಿಗ್ಗೆ ಲೋಕಾಯುಕ್ತ ಕಚೇರಿಗೆ ಬಂದು, ತನಿಖಾಧಿಕಾರಿಯ ಎದುರು ವಿಚಾರಣೆಗೆ ಹಾಜರಾದರು.
‘ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ 5 ತಾಸು ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ನಿಂಗಪ್ಪ ಮತ್ತು ಅವರ ನಡುವಣ ವ್ಯಾವಹಾರಿಕ ಸಂಬಂಧಗಳ ಬಗ್ಗೆ ಮಾಹಿತಿ ಪ್ರಶ್ನೆ ಕೇಳಲಾಯಿತು. ನಿಂಗಪ್ಪ ಜತೆಗೆ ಹೋಟೆಲ್ ಒಂದರಲ್ಲಿ ಅಬಕಾರಿ ಸಚಿವರ ಆಪ್ತರನ್ನು ಭೇಟಿ ಮಾಡಿದ್ದರ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು’ ಎಂದು ಮೂಲಗಳು ಮಾಹಿತಿ ನೀಡಿವೆ.
‘ನಿಂಗಪ್ಪ ಅವರ ಮನೆಗೆ ಭೇಟಿ ನೀಡಿದ್ದು, ಅವರ ಮನೆಯಲ್ಲಿ ಸಂಭ್ರಮಾಚರಣೆ ನಡೆಸಿದ್ದು, ಹಣಕಾಸು ವ್ಯವಹಾರಗಳ ಬಗ್ಗೆ ವಿಚಾರಿಸಲಾಯಿತು. ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಹಣ ಹೂಡಿಕೆ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಹಲವು ಪ್ರಶ್ನೆಗಳಿಗೆ ಅವರು ವ್ಯತಿರಿಕ್ತವಾದ ಉತ್ತರಗಳನ್ನು ನೀಡಿದ್ದು, ಮತ್ತೆ ವಿಚಾರಣೆಗೆ ಕರೆಸಲಾಗುತ್ತದೆ’ ಎಂದು ತಿಳಿಸಿವೆ.
‘ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಲಾಯಿತು. ಅದರಲ್ಲಿನ ಹಲವು ಮಾಹಿತಿಗಳನ್ನು ಡಿಲೀಟ್ ಮಾಡಲಾಗಿದೆ. ಹೀಗಾಗಿ ಹೆಚ್ಚಿನ ಪರಿಶೀಲನೆ ಮತ್ತು ದತ್ತಾಂಶ ಮರುಸ್ಥಾಪಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಆ ಮೊಬೈಲ್‌ಗಳನ್ನು ಕಳುಹಿಸಲಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.