ADVERTISEMENT

ಲೋಕಸಭಾ ಚುನಾವಣೆ: ದಕ್ಷಿಣಕನ್ನಡಕ್ಕೆ ರೈ, ಉಡುಪಿಗೆ ಸೊರಕೆ, ಶಿವಮೊಗ್ಗಕ್ಕೆ ಕಾಗೋಡು

ಕಾಂಗ್ರೆಸ್‌ ಪಾಳಯದಲ್ಲಿ ಒಲವು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2018, 19:44 IST
Last Updated 3 ಆಗಸ್ಟ್ 2018, 19:44 IST
ಕಾಗೋಡು ತಿಮ್ಮಪ್ಪ , ಬಿ.ರಮಾನಾಥ ರೈ
ಕಾಗೋಡು ತಿಮ್ಮಪ್ಪ , ಬಿ.ರಮಾನಾಥ ರೈ   

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಿಂದ ಬಿ.ರಮಾನಾಥ ರೈ, ಉಡುಪಿ–ಚಿಕ್ಕಮಗಳೂರಿನಿಂದ ವಿನಯಕುಮಾರ್‌ ಸೊರಕೆ ಹಾಗೂ ಶಿವಮೊಗ್ಗದಿಂದ ಕಾಗೋಡು ತಿಮ್ಮಪ್ಪ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಪಕ್ಷದಲ್ಲಿ ಗಂಭೀರ ಚಿಂತನೆ ನಡೆದಿದೆ.

ಮೈಸೂರು–ಕೊಡಗುಕ್ಷೇತ್ರದಿಂದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಚಿತ್ರನಟ ಎಂ.ಎಚ್.ಅಂಬರೀಷ್, ಮಾಜಿ ಸಂಸದ ಸಿ.ಎಚ್. ವಿಜಯಶಂಕರ್‌ ಅವರ ಹೆಸರು ಪ್ರಸ್ತಾಪವಾಯಿತು. ಆದರೆ, ಈ ವಿಷಯದ ತೀರ್ಮಾನವನ್ನು ಹೈಕಮಾಂಡ್‌ಗೆ ಬಿಡಲಾಯಿತು. ಮಂಡ್ಯ ಮತ್ತು ಹಾಸನ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಚರ್ಚೆ ನಡೆಯಿತು.

ಚುನಾವಣಾ ತಯಾರಿ ಸಂಬಂಧ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಯಿತು.

ADVERTISEMENT

ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ರೈ ಹಾಗೂ ಕಾಪು ಕ್ಷೇತ್ರದಲ್ಲಿ ಸೊರಕೆ, ಸಾಗರ ಕ್ಷೇತ್ರದಲ್ಲಿ ಕಾಗೋಡು ಸೋತಿದ್ದರು. ಸೊರಕೆ ಅವರು ಈ ಹಿಂದೆ ಉಡುಪಿ ಸಂಸದರಾಗಿದ್ದರು. ಅಂಬರೀಷ್ ಮಂಡ್ಯದಿಂದ, ವಿಜಯಶಂಕರ್ ಮೈಸೂರಿನಿಂದ ಹಿಂದೆ ಸಂಸದರಾಗಿ ಆಯ್ಕೆಯಾಗಿದ್ದರು.

ಉಡುಪಿ ಕ್ಷೇತ್ರದಿಂದ ಸೊರಕೆ, ಚಿಕ್ಕಬಳ್ಳಾಪುರ ಸಂಸದ ಎಂ. ವೀರಪ್ಪ ಮೊಯಿಲಿ ಹಾಗೂ ರಾಜ್ಯಸಭಾ ಸದಸ್ಯ ಬಿ.ಕೆ.ಹರಿ‍ಪ್ರಸಾದ್‌ ಹೆಸರುಗಳು ಪ್ರಸ್ತಾಪವಾದವು.

ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಜಿಲ್ಲಾ ಪ್ರಮುಖರು ತೀವ್ರ ವಿರೋಧ ವ್ಯಕ್ತ ಪಡಿಸಿದರು. ಹಿರಿಯರಾದ ಕಾಗೋಡು ಸ್ಪರ್ಧೆಗಿಳಿದರೆ ಮಾತ್ರ ಬಿಜೆಪಿಯನ್ನು ಮಣಿಸಲು ಸಾಧ್ಯ ಎಂದು ಶಾಸಕ ಬಿ.ಕೆ. ಸಂಗಮೇಶ್ವರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಕೆ.ಬಿ. ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು. ರಾಜ್ಯ ಮಟ್ಟದ ನಾಯಕರು ಕೂಡ ಇದಕ್ಕೆ ಸಮ್ಮತಿ ಸೂಚಿಸಿದರು.

ಹಾಸನ ಕ್ಷೇತ್ರದ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅಲ್ಲಿನ ನಾಯಕರು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದರು.

‘ಸ್ಥಳೀಯ ಮಟ್ಟದಲ್ಲಿ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರ ಜತೆಗೆ ನಿತ್ಯ ಕಾದಾಡುತ್ತಿದ್ದೇವೆ. ಮೈತ್ರಿ ಸರ್ಕಾರ ಬಂದ ಬಳಿಕ ನಮ್ಮ ಸ್ಥಿತಿ ಮತ್ತಷ್ಟು ಹೀನಾಯವಾಗಿದೆ. ಲೋಕಸಭೆಯಲ್ಲೂ ಈ ಹೊಂದಾಣಿಕೆ ಮುಂದುವರಿಸಿದರೆ ಪಕ್ಷ ಸಂಪೂರ್ಣ ನಾಶವಾಗಲಿದೆ’ ಎಂದು ಮಾಜಿ ಸಚಿವ ಎ. ಮಂಜು ಎಚ್ಚರಿಸಿದರು. ಈ ವಿಷಯದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ವೇಣುಗೋಪಾಲ್ ಸೂಚಿಸಿದರು.

‘ಘರ್‌ ವಾಪ್ಸಿ’ ವಿಸ್ತಾರಕ್‌...

ಕಾಂಗ್ರೆಸ್‌ ಸಹ ಬಿಜೆಪಿಯ ‘ವಿಸ್ತಾರಕ್‌’ ಮಾದರಿಯನ್ನು ಅನುಸರಿಸಲು ಮುಂದಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ವಿಸ್ತಾರಕರನ್ನು ನೇಮಿಸಿದ್ದ ಬಿಜೆಪಿ ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು. ಅದೇ ಮಾದರಿಯನ್ನೂ ಅನುಸರಿಸಬೇಕು ಎಂಬ ಬಗ್ಗೆ ಕಾಂಗ್ರೆಸ್‌ ಸಭೆಯಲ್ಲಿ ಚರ್ಚೆ ನಡೆಯಿತು.

‘ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾರಣಕ್ಕೆ ಧೃತಿಗೆಡಬೇಡಿ. ಕರಾವಳಿಯಲ್ಲಿ ಒಂದು ಕಾಲದಲ್ಲಿ ಪಕ್ಷ ಬಲವಾಗಿತ್ತು. ಈಗ ಸೋತು ಸುಣ್ಣವಾಗಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಘಟನೆ ಮಾಡಬೇಕು. 30 ಕಾರ್ಯಕರ್ತರಿಗೆ ಒಬ್ಬ ಮುಖಂಡರ ನೇಮಕ ಮಾಡಿಕೊಳ್ಳಿ’ ಎಂದು ವೇಣುಗೋಪಾಲ್‌ ಸೂಚಿಸಿದರು. ‘ಚುನಾವಣಾ ಉಸ್ತುವಾರಿ ತೆಗೆದುಕೊಳ್ಳುವವರು ಬೇಕಿಲ್ಲ. ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುವವರು ಬೇಕು’ ಎಂದು ಸಿದ್ದರಾಮಯ್ಯ ಧ್ವನಿಗೂಡಿಸಿದರು.

‘ಚುನಾವಣೆಗೆ ಮೊದಲು ಎಷ್ಟು ಸಮಾವೇಶ ಹಾಗೂ ಸಭೆಗಳನ್ನು ನಡೆಸಬೇಕು ಎಂಬ ಬಗ್ಗೆ ಗುರಿ ನಿಗದಿ ಮಾಡುತ್ತೇವೆ. ಕೆಲಸ ಮಾಡದವರ ಪಟ್ಟಿ ಕೊಡಿ. ಅಂತವರನ್ನು ಪಕ್ಷದ ಪದಾಧಿಕಾರಿಗಳ ಹುದ್ದೆಯಿಂದ ಕಿತ್ತು ಹಾಕುತ್ತೇವೆ. ಬ್ಲಾಕ್‌ಗಳ ಪುನರ್‌ ರಚನೆ ಮಾಡುತ್ತೇವೆ’ ಎಂದರು.

ಪಕ್ಷಕ್ಕೆ ಕರೆ ತನ್ನಿ: ಕರಾವಳಿ ಹಾಗೂ ಮಲೆನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಮುಖಂಡರು ಪಕ್ಷ ಬಿಟ್ಟು ಹೋಗಿದ್ದಾರೆ. ಕೆ.ಜಯಪ್ರಕಾಶ್‌ ಹೆಗ್ಡೆ, ತರೀಕೆರೆಯ ಜಿ.ಎಚ್‌.ಶ್ರೀನಿವಾಸ್‌ ಸೇರಿದಂತೆ ಹಲವು ಮುಖಂಡರನ್ನು ಪಕ್ಷಕ್ಕೆ ಕರೆ ತರುವಂತೆ ಎಂದು ವೇಣುಗೋಪಾಲ್‌ ತಾಕೀತು ಮಾಡಿದರು. ಈ ಬಗ್ಗೆ ಪಟ್ಟಿ ಕೊಡುವಂತೆ ಜಿಲ್ಲಾ ಮುಖಂಡರಿಗೆ ನಿರ್ದೇಶನ ನೀಡಿದರು.

ಸಿದ್ದರಾಮಯ್ಯ ದೆಹಲಿಗೆ: ಶನಿವಾರ ನಡೆಯಲಿರುವ ಪಕ್ಷದ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಶುಕ್ರವಾರ ದೆಹಲಿಗೆ ತೆರಳಿದರು.

***

ಪಕ್ಷ ಸಾಕಷ್ಟು ಅವಕಾಶ ನೀಡಿದ್ದು, ಋಣಮುಕ್ತನಾಗಲು ಸಾಧ್ಯವಿಲ್ಲ. ಅವಕಾಶ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ.
– ಬಿ.ರಮಾನಾಥ ರೈ

***

ಶಿವಮೊಗ್ಗ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಸೋತಿದ್ದೇವೆ. ಎಲ್ಲರೂ ಒಟ್ಟಾಗಿ ದೊಡ್ಡ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ.
ಕಾಗೋಡು ತಿಮ್ಮಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.