ADVERTISEMENT

ಎರಡು ಚುನಾವಣೆ ಮೋದಿ ಗೆಲ್ಲುತ್ತಾರೆ: ಬಿ.ಜನಾರ್ದನ ಪೂಜಾರಿ

​ಪ್ರಜಾವಾಣಿ ವಾರ್ತೆ
Published 3 ಮೇ 2019, 17:29 IST
Last Updated 3 ಮೇ 2019, 17:29 IST
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್‌ ಕಟೀಲ್‌ ಮಂಗಳೂರಿನಲ್ಲಿ ಭಾನುವಾರ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು ಪ್ರಜಾವಾಣಿ ಚಿತ್ರ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್‌ ಕಟೀಲ್‌ ಮಂಗಳೂರಿನಲ್ಲಿ ಭಾನುವಾರ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು ಪ್ರಜಾವಾಣಿ ಚಿತ್ರ   

ಮಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇನ್ನೂ ಎರಡು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ' ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಹೇಳಿದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರು ಭಾನುವಾರ ಮಧ್ಯಾಹ್ನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜಾರಿಯವರ ಆಶೀರ್ವಾದ ಪಡೆದರು. ಬಳಿಕ ಪೂಜಾರಿ ಪತ್ರಕರ್ತರ ಜೊತೆ ಮಾತನಾಡಿದರು.

‘ಇಡೀ ದೇಶದಲ್ಲಿ ಮೋದಿ ಪರವಾದ ಒಲವು ಇದೆ. ಇನ್ನೂ ಎರಡು ಚುನಾವಣೆಗಳಲ್ಲಿ ಅವರು ಗೆಲ್ಲುತ್ತಾರೆ. ಇನ್ಯಾರಿಗೂ ಗೆಲುವು ಸಿಗುವುದಿಲ್ಲ. ದೇಶದಲ್ಲಿ ಜನರ ಮನಸ್ಥಿತಿ ಹಾಗಿದೆ. ಮೋದಿಯವರ ಪರವಾದ ಕೆಲವು ಅಂಶಗಳು ಕೆಲಸ ಮಾಡುತ್ತವೆ’ ಎಂದು ಹೇಳಿದರು.

ADVERTISEMENT

‘ನಳಿನ್ ಕುಮಾರ್ ಕಟೀಲ್ ಅವರಿಗೆ ದೇವರು ಒಳ್ಳೆಯದು ಮಾಡುತ್ತಾರೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ಕೊಡಬೇಕು ಎಂಬ ಭಾವನೆಯಲ್ಲಿ ಕಾಂಗ್ರೆಸ್ ಪಕ್ಷ ಮಿಥುನ್‌ ರೈ ಅವರನ್ನು ಆಯ್ಕೆ ಮಾಡಿದೆ. ಮಿಥುನ್‌ ರೈ ಕೂಡ ಒಳ್ಳೆಯ ಅಭ್ಯರ್ಥಿ. ಆದರೆ, ಕಾಂಗ್ರೆಸ್‌ಗೆ ಈಗ ಅನುಕೂಲಕರ ಪರಿಸ್ಥಿತಿ ಇಲ್ಲ. ಎರಡು ಚುನಾವಣೆವರೆಗೂ ಇಲ್ಲಿ ಯಾರೂ ಗೆಲ್ಲಲ್ಲ’ ಎಂದರು.

‘ಮೋದಿ ದೇಶದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳಿನ್‌ಕುಮಾರ್‌ ಕಟೀಲ್‌ ಅಭಿವೃದ್ಧಿ ಮಾಡಿದ್ದಾರಾ? ಅನ್ನೋದು ಜನರಿಗೆ ಬಿಟ್ಟ ವಿಚಾರ’ ಎಂದು ಹೇಳಿದರು.

‘ಮಂಡ್ಯದಲ್ಲಿ ಸುಮಲತಾ ಗೆಲುವು ಸಾಧಿಸುತ್ತಾರೆ. ಸ್ವಲ್ಪ ಬದಲಾವಣೆ ಆಗೋದು ಮಂಡ್ಯದಲ್ಲಿ ಮಾತ್ರ. ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಗೆಲ್ಲುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.