
ಬೆಂಗಳೂರು: ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಸಂಬಂಧ ವಿವಿಧ ಇಲಾಖೆಗಳ ಎಂಟು ಅಧಿಕಾರಿಗಳ ಮನೆ, ಕಚೇರಿ ಮತ್ತು ಸಂಬಂಧಿಕರ ಮನೆಗಳಲ್ಲಿ ಶೋಧ ನಡೆಸಿದ ಲೋಕಾಯುಕ್ತ ಪೊಲೀಸರು, ₹34.90 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.
ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಧಾರವಾಡ, ಕಲಬುರಗಿ ಹಾಗೂ ಬೆಳಗಾವಿಯ ಒಟ್ಟು 45 ಸ್ಥಳಗಳಲ್ಲಿ ಪೊಲೀಸರ ತಂಡವು ಮಂಗಳವಾರ ಬೆಳಿಗ್ಗೆ ಏಕಕಾಲಕ್ಕೆ ಶೋಧ ನಡೆಸಿತು.
ಅಧಿಕಾರಿಗಳ ಮನೆಗಳನ್ನು ಜಾಲಾಡಿದ ತನಿಖಾಧಿಕಾರಿಗಳ ತಂಡ, ಕೋಟ್ಯಂತರ ಮೌಲ್ಯದ ಸ್ಥಿರಾಸ್ತಿ, ಚಿನ್ನಾಭರಣ, ವಿದೇಶಿ ಕರೆನ್ಸಿ, ಜರ್ಮನ್ ಗಿಳಿ, ದುಬಾರಿ ವಾಚ್‌ಗಳನ್ನು ಪತ್ತೆ ಮಾಡಿದೆ. ಅಧಿಕಾರಿಗಳು ನಿವೇಶನ ಮತ್ತು ಕೃಷಿ ಜಮೀನುಗಳ ಮೇಲೆ ಹೂಡಿಕೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಶೋಧದ ವೇಳೆ ಪತ್ತೆಯಾಗಿವೆ.
ಆರೋಪಿಗಳ ಬಳಿ ₹23 ಕೋಟಿ ಮೌಲ್ಯದ ಸ್ಥಿರಾಸ್ತಿಗಳು, ₹27.55 ಲಕ್ಷ ನಗದು, ₹3.72 ಕೋಟಿ ಮೌಲ್ಯದ ಚಿನ್ನಾಭರಣ, ₹1.70 ಕೋಟಿ ಮೌಲ್ಯದ ವಾಹನಗಳು ಹಾಗೂ ₹6.18 ಕೋಟಿ ಇತರೆ ಸ್ವತ್ತುಗಳನ್ನು ಪತ್ತೆ ಮಾಡಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ವಿಭಾಗ ತಿಳಿಸಿದೆ.
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಹಾಗೂ ಸಹಾಯಕ ಸಂಶೋಧನಾ ನಿರ್ದೇಶಕ ಎಸ್.ಪ್ರದೀಪ್ ಬಳಿ ಅತ್ಯಧಿಕ ₹6.34 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಲಾಗಿದೆ. ಅವರು 5 ನಿವೇಶನಗಳು, ಒಂದು ಮನೆ, 16.7 ಎಕರೆ ಕೃಷಿ ಜಮೀನು ಹೊಂದಿರುವುದು ಪತ್ತೆಯಾಗಿದೆ.
ಕಲಬುರಗಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಅಲ್ಲಿಪುರ ಬಳಿ ₹6.32 ಕೋಟಿ ಮೌಲ್ಯದ ಅಕ್ರಮ ಆಸ್ತಿ ಇರುವುದನ್ನು ತನಿಖಾ ತಂಡ ಪತ್ತೆ ಮಾಡಿದೆ. ಅವರು 3 ಮನೆಗಳು, 4 ಎಕರೆ ಕೃಷಿ ಜಮೀನು ಹಾಗೂ ಬ್ಯಾಂಕ್ ಖಾತೆಯಲ್ಲಿ ₹1 ಕೋಟಿ ನಗದು ಹೊಂದಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಯೋಜನಾ ವಲಯದ ಮುಖ್ಯ ಎಂಜಿನಿಯರ್ ಅಶೋಕ್ ಲಕ್ಷ್ಮಪ್ಪ ವಸನಾಡ್ ಬಳಿ ₹6.11 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಲಾಗಿದೆ. ಅವರು 7 ನಿವೇಶನಗಳು, 3 ವಾಸದ ಮನೆ, 19 ಎಕರೆ ಕೃಷಿ ಜಮೀನು ಹೊಂದಿದ್ದಾರೆ.
ಕಲಬುರಗಿ ಜಿಲ್ಲೆಯ ಸಣ್ಣೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಚಂದ್ರ ಮಸರಕಲ್ ಬಳಿ ₹2.18 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದ್ದು, ಅವರು 3 ನಿವೇಶನ, 3 ವಾಸದ ಮನೆ ಹಾಗೂ 35 ಎಕರೆ ಕೃಷಿ ಜಮೀನು ಹೊಂದಿರುವುದನ್ನು ತನಿಖಾ ತಂಡ ಪತ್ತೆ ಮಾಡಿದೆ.
ಎಂಟು ಮಂದಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಮಿನಾರ್‌ಗೆ ಹೊರಟಿದ್ದರು..
ಶಿವಮೊಗ್ಗ: ಪ್ರದೀಪ್ ಅವರು 16 ವರ್ಷಗಳಿಂದ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದು ಮಹಾರಾಷ್ಟ್ರದ ನಾಗ್ಪುರದಲ್ಲಿ ಸೆಮಿನಾರ್‌ನಲ್ಲಿ ಪಾಲ್ಗೊಳ್ಳಲು ಸೋಮವಾರ ಬೆಳಗಿನ ಜಾವ 5 ಗಂಟೆಗೆ ಹೊರಟು ನಿಂತಿದ್ದರು. ಇದೇ ವೇಳೆ ಲೋಕಾಯುಕ್ತ ಸಿಬ್ಬಂದಿ ದಾಳಿ ಮಾಡಿದ್ದಾರೆ. ಬ್ಯಾಂಕ್‌ನಲ್ಲಿರುವ ಪ್ರದೀಪ್ ಅವರ ಲಾಕರ್ ಅನ್ನು ಬುಧವಾರ ತೆರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.