ಬೆಂಗಳೂರು: ಕೆಪಿಸಿಸಿಗೆ ಪದಾಧಿಕಾರಿಗಳ ನೇಮಕ ವಿಳಂಬವಾಗುತ್ತಿರುವುದನ್ನು ರಾಜ್ಯ ಬಿಜೆಪಿ ವ್ಯಂಗ್ಯ ಮಾಡಿದೆ. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು #ಏಕಾಂಗಿಮಹಾನಾಯಕ ಎಂಬ ಹ್ಯಾಷ್ ಟ್ಯಾಗ್ ಬಳಸಿ ಲೇವಡಿ ಮಾಡಿದೆ.
‘ಎಐಸಿಸಿಗೆ ಹಂಗಾಮಿ ಅಧ್ಯಕ್ಷರು ಕಾಯಂ ಆಗಿದ್ದಾರೆ. ಏಕೆಂದರೆ ಕುಟುಂಬದ ಅಧಿಕಾರ ಕಾಪಾಡಿಕೊಳ್ಳುವುದಕ್ಕೆ ಇರುವುದು ಅದೊಂದೇ ದಾರಿ. ಆದರೆ ಕೆಪಿಸಿಸಿ ಅಧ್ಯಕ್ಷರಿಗೆ ಏನಾಗಿದೆ? ಅಧಿಕಾರ ಸ್ವೀಕರಿಸಿ ವರ್ಷವಾದರೂ ಮಹಾನಾಯಕ ಇನ್ನೂ ಏಕಾಂಗಿಯಾಗಿಯೇ ಉಳಿದಿದ್ದಾರೆ. ಪದಾಧಿಕಾರಿಗಳನ್ನು ನೇಮಿಸಿಕೊಳ್ಳಲಾರದೇ ಪರದಾಡುತ್ತಿದ್ದಾರೆ,’ ಎಂದು ಬಿಜೆಪಿ ಹೇಳಿದೆ.
‘ಪದಾಧಿಕಾರಿಗಳ ನೇಮಕಕ್ಕೂ ಪರಿತಪಿಸುತ್ತಿರುವ ಡಿ.ಕೆ ಶಿವಕುಮಾರ್ ಅವರ ಸುತ್ತಲೂ ಶತ್ರುಗಳು ತುಂಬಿಕೊಂಡಿದ್ದಾರೆ. ಐವರು ಕಾರ್ಯಾಧ್ಯಕ್ಷರ ನೇಮಕವಾಗುವಂತೆ ನೋಡಿಕೊಳ್ಳುವ ಮೂಲಕ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರ ಕೈ ಕಟ್ಟಿ ಹಾಕಿದ್ದಾರೆ. ರಾಹುಲ್ ಗಾಂಧಿಯ ಎದುರು ಕಣ್ಣೀರಿಟ್ಟರೂ ಪ್ರಯೋಜನವಿಲ್ಲದಂತಾಗಿದೆ,‘ ಎಂದು ಬಿಜೆಪಿಯು ಡಿಕೆಶಿ ಅವರನ್ನು ವ್ಯಂಗ್ಯವಾಡಿದೆ.
ಈ ಎಲ್ಲ ಟ್ವೀಟ್‌ಗಳಿಗೂ ಬಿಜೆಪಿಯು #ಏಕಾಂಗಿಮಹಾನಾಯಕ ಎಂಬ ಹ್ಯಾಷ್ ಟ್ಯಾಗ್ ಬಳಸಿದೆ.
ಕೆಪಿಸಿಸಿಗೆ ಪದಾಧಿಕಾರಿಗಳನ್ನು ನೇಮಕ ಮಾಡುವ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟ್ವೀಟ್ ಸಮರ ನಡೆಯುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಇಂದೂ ಡಿಕೆಶಿ ಮೇಲೆ ಬಿಜೆಪಿ ಮುಗಿಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.