ADVERTISEMENT

ಈಶ್ವರಪ್ಪ ಈಗಲೂ ಕಾಲ ಮಿಂಚಿಲ್ಲ ವಾಪಸ್ ಬನ್ನಿ: ಬಿ.ವೈ. ವಿಜಯೇಂದ್ರ ಮನವಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 6:12 IST
Last Updated 7 ಏಪ್ರಿಲ್ 2024, 6:12 IST
<div class="paragraphs"><p>ಕೆ.ಎಸ್. ಈಶ್ವರಪ್ಪ, ಬಿ.ವೈ. ವಿಜಯೇಂದ್ರ</p></div>

ಕೆ.ಎಸ್. ಈಶ್ವರಪ್ಪ, ಬಿ.ವೈ. ವಿಜಯೇಂದ್ರ

   

ಶಿವಮೊಗ್ಗ: 'ಈಶ್ವರಪ್ಪ ನೀವು ಹಿರಿಯರು. ರಾಜ್ಯದಲ್ಲಿ ಬಿಜೆಪಿ ಕಟ್ಟಲು ನಿಮ್ಮದೂ ದೊಡ್ಡ ಪಾಲಿದೆ. ಯಾವುದೋ ಪರಿಸ್ಥಿತಿ, ತಪ್ಪು ಸಂದರ್ಭ ತಮ್ಮನ್ನು ಈ ಸನ್ನಿವೇಶಕ್ಕೆ ದೂಡಿದೆ. ಕಾಲ ಮಿಂಚಿಲ್ಲ ವಾಪಸ್ ಬನ್ನಿ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಲು ಪಕ್ಷದ ಹಿತದೃಷ್ಟಿಯಿಂದ ಕೆ.ಎಸ್.ಈಶ್ವರಪ್ಪ ಅವರು ನಮ್ಮೊಂದಿಗೆ ಕೈಜೋಡಿಸಬೇಕು' ಎಂದರು.

ADVERTISEMENT

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸಹೋದರ ಬಿ.ವೈ. ರಾಘವೇಂದ್ರ ಮಾಡಿರುವ ಅಭಿವೃದ್ಧಿಯ ಬಗ್ಗೆ ಜನರು ಮಾತಾಡುತ್ತಿದ್ದಾರೆ. ಹೀಗಾಗಿ ಅವರು ಈ ಬಾರಿ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಈಶ್ವರಪ್ಪ ಅವರಿಗೆ ಇನ್ನೂ ಕಾಲ ಮಿಂಚಿಲ್ಲ. ಕೈ ಜೋಡಿಸಿ ಎಂದು ಮತ್ತೊಮ್ಮೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.

'ಈಶ್ವರಪ್ಪ ಅವರಿಗೆ ಸಮಸ್ಯೆ ಇದ್ದರೆ ದೆಹಲಿ ನಾಯಕರ ಜೊತೆ ಮಾತನಾಡಲಿ. ನಾವು ಅವರ ಜೊತೆ‌ ಇರುತ್ತೇವೆ. ಅವರೂ ನಮ್ಮ ಜೊತೆ ಇರಬೇಕು ಎಂಬುದು ಆಸೆ' ಎಂದರು.

ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ಬಿಜೆಪಿ ಪರ ಒಲವು ಕಾಣತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಇದು ಕಾಂಗ್ರೆಸ್ ‌ಪಕ್ಷವನ್ನು ನಿದ್ರೆಗೆಡಿಸಿದೆ. ನರೇಂದ್ರ ಮೋದಿ ಪ್ರತಿ ಕುಟುಂಬಕ್ಕೆ ಐದು ಕೆ.ಜಿ ಅಕ್ಕಿ ಕೊಡುತ್ತಿದ್ದಾರೆ. ರೈತರಿಗೆ ಕಿಸಾನ್ ಸಮ್ಮಾನ್ ಕೊಡುತ್ತಿದ್ದಾರೆ ಎಂದರು.

ಮನೆ ಮನೆಯಲ್ಲಿ ಜನರು ನರೇಂದ್ರ ‌ಮೋದಿ ಬಗ್ಗೆ ಮಾತಾಡುತ್ತಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಲಿ ಎಂದು ಹರಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ 28 ಸ್ಥಾನಗಳಲ್ಲೂ ಗೆಲುವು ಸಾಧಿಸಲಿದೆ. ಅದರಲ್ಲಿ ಯಾವುದೇ ಅನುಮಾನ ‌ಇಲ್ಲ. ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ದಿಕ್ಕಾಪಾಲಾಗುತ್ತದೆ. ಅವರು ರಾಜ್ಯದಲ್ಲಿ ಯಾವುದೇ ಸ್ಥಾನ ಗೆಲ್ಲುವುದಿಲ್ಲ ಎಂದರು.

ಹಾಸನದಲ್ಲಿ ಪ್ರೀತಂಗೌಡ ಜೊತೆ ಮಾತಾಡಿದ್ದೇನೆ. ಅವರಿಗೆ ಮೈಸೂರು ಚಾಮರಾಜನಗರ ‌ಜವಾಬ್ದಾರಿ ಕೊಟ್ಟಿದ್ದೇವೆ. ಎಲ್ಲವೂ ಸರಿ ಹೋಗುತ್ತದೆ. ಪ್ರಜ್ವಲ್ ರೇವಣ್ಣ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಇನ್ನೂ ನಾಲ್ಕೈದು ಬಾರಿ ರಾಜ್ಯಕ್ಕೆ ಪ್ರಚಾರಕ್ಕೆ ಬರುತ್ತಾರೆ. ಯೋಗಿ ಆದಿತ್ಯನಾಥ್ ಕೂಡ ಬರಲಿದ್ದಾರೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿದರೆ‌ ನಾವು ಸುಮ್ಮನಿರೊಲ್ಲ. 'ಗ್ಯಾರಂಟಿ' ಯೋಜನೆಗಳ ಮೇಲೆ ಅಧಿಕಾರಕ್ಕೆ ಬಂದಿದ್ದೀರಿ. ಅವುಗಳನ್ನು ‌ಮುಂದುವರೆಸಿ ಎಂದು ಒತ್ತಾಯಿಸಲಿದ್ದೇವೆ.

ಬರದ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರಿಗೆ ಏನು ಮಾಡಿದೆ. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಸಾಕಷ್ಟು ಅನುದಾನ ಕೊಟ್ಟಿತ್ತು. ಈಗ ಪರಿಹಾರ ಕೊಡಲು ಇವರಿಗೆ (ಕಾಂಗ್ರೆಸ್) ಏನು ದಾಡಿಯಾಗಿದೆ. ರೈತರಿಗೆ ಮೊದಲು‌ ಪರಿಹಾರ ಕೊಡಿ ಎಂದು ವಿಜಯೇಂದ್ರ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.