ADVERTISEMENT

ಸಿದ್ದರಾಮಯ್ಯ ಮುಸ್ಲಿಂ ಹಿತಾಸಕ್ತಿ ರಕ್ಷಣೆಯ ವ್ರತಧಾರಿ: ಸುನಿಲ್ ಕುಮಾರ್‌

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:44 IST
Last Updated 25 ಏಪ್ರಿಲ್ 2024, 15:44 IST
<div class="paragraphs"><p>ವಿ. ಸುನಿಲ್ ಕುಮಾರ್‌</p></div>

ವಿ. ಸುನಿಲ್ ಕುಮಾರ್‌

   

(ಸಂಗ್ರಹ ಚಿತ್ರ)

ಬೆಂಗಳೂರು: ‘ಸಿದ್ದರಾಮಯ್ಯನವರೇ ಹಿಂದುಳಿದ ವರ್ಗದ ರಾಜಕೀಯ ಮೀಸಲಾತಿಗೆ ಕಣ್ಣೆದುರೇ ಅನ್ಯಾಯವಾಗುತ್ತಿದೆ. ಆದರೆ, ಮುಸ್ಲಿಂ ಹಿತಾಸಕ್ತಿ ರಕ್ಷಣೆಯ ವ್ರತಧಾರಿಯಾಗಿದ್ದೀರಿ. ನೀವು ಯಾವ ಸೀಮೆಯ ಹಿಂದುಳಿದ ವರ್ಗದ ನಾಯಕ’ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಂಚಾಲಕ ವಿ. ಸುನಿಲ್‌ ಕುಮಾರ್‌ ಪ್ರಶ್ನಿಸಿದ್ದಾರೆ.

ADVERTISEMENT

‘ಓಬಿಸಿ ಮೀಸಲು ಹಕ್ಕನ್ನು ಮುಸಲ್ಮಾನರಿಗೆ ಹಂಚುತ್ತಿರುವ ನಿಮ್ಮ ನಿರ್ಧಾರದ ಬಗ್ಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಆಕ್ಷೇಪಿಸಿರುವುದು ಸಮಂಜಸವಾಗಿದೆ. ಮುಸ್ಲಿಮರಿಗೆ ಧರ್ಮಾಧಾರಿತವಾಗಿ ನೀಡುತ್ತಿದ್ದ ಮೀಸಲು ಸೌಲಭ್ಯವನ್ನು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿತ್ತು. ಆದರೆ, ನೀವು ಹಿಂಬಾಗಿಲ ಮೂಲಕ ಆ ನಿರ್ಧಾರಕ್ಕೆ ಅಡ್ಡಿ ತಂದಿರಿ’ ಎಂದು ಕಿಡಿ ಕಾರಿದ್ದಾರೆ.

‘ನಮ್ಮ ಸರ್ಕಾರ ಮುಸ್ಲಿಂ ಮೀಸಲಾತಿ ರದ್ದು ಮಾಡಿದಾಗ ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನೀವೇ ಪ್ರೇರಣೆ ನೀಡಿದ್ದೀರಿ. ನಿಜಕ್ಕೂ ನಿಮಗೆ ಹಿಂದುಳಿದ ವರ್ಗಗಳ ಮೇಲೆ ಕಾಳಜಿ ಇದ್ದಿದ್ದರೆ ಈ ಅರ್ಜಿಯ ವಿರುದ್ಧ ರಾಜ್ಯ ಸರ್ಕಾರದ ಪರವಾಗಿ ವಾದ ಹೂಡುತ್ತಿದ್ದೀರಿ. ಅದನ್ನು ಬಿಟ್ಟು ನಿಮ್ಮ ಸಂಚು ಬಯಲು ಮಾಡಿದ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ನೀವು ಹಿಂದುಳಿದ ವರ್ಗಗಳ ಪರವೋ? ಮುಸ್ಲಿಮರ ಪರವೋ? ಎಂಬುದು ಅರ್ಥವಾಗುತ್ತದೆ’ ಎಂದು ಹೇಳಿದರು.

ಹಿಂದುಳಿದ ವರ್ಗಗಳಿಗೆ ಸೇರಿದ ನೂರಾರು ಸಣ್ಣ ಸಣ್ಣ ಉಪಜಾತಿಗಳಿಗೆ ಕನಿಷ್ಠ ಗ್ರಾಮ ಪಂಚಾಯಿತಿ ಸದಸ್ಯರಾಗುವ ಅವಕಾಶವೂ ಸಿಕ್ಕಿಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರಿಗಾಗಿ ಮೀಸಲು ವರ್ಗೀಕರಣ ಮಾಡಬೇಕೆಂದು ನ್ಯಾ.ಭಕ್ತವತ್ಸಲಂ ಸಮಿತಿ ಶಿಫಾರಸು ಮಾಡಿತ್ತು. ಆದರೆ ನಿಮ್ಮ ಸರ್ಕಾರ ಇದನ್ನು ಒಪ್ಪಿಕೊಳ್ಳದೇ ಇದ್ದಿದ್ದು ಯಾಕೆ? ಇದರಿಂದ ಮುಸ್ಲಿಂ ಮೀಸಲಾತಿಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕಲ್ಲವೇ’ ಎಂದು ಸುನಿಲ್‌ಕುಮಾರ್ ಪ್ರಶ್ನಿಸಿದ್ದಾರೆ.

‘ಧರ್ಮಾಧಾರಿತ ಮೀಸಲು ಸೌಲಭ್ಯಕ್ಕೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಆದರೂ ಮುಸ್ಲಿಂ ಮೀಸಲಾತಿ ಮುಂದುವರೆಸುತ್ತೇವೆ ಎಂಬುದು ಸಂವಿಧಾನದ ಆಶಯಕ್ಕೆ ವಿರುದ್ಧ. ಕಾನೂನು ಪಂಡಿತರಂತೆ ವರ್ತಿಸುವ ನೀವು ಸಂವಿಧಾನದ ಆಶಯಗಳನ್ನು ಮನ ಬಂದಂತೆ ವ್ಯಾಖ್ಯಾನಿಸಿ ಅನುಷ್ಠಾನಗೊಳಿಸುವುದು ಎಷ್ಟು ಸರಿ? ಅನ್ಯಾಯವನ್ನು ಸಮರ್ಥಿಸುತ್ತಿರುವ ನೀವು ರಾಜ್ಯದ ಜನರ ಕ್ಷಮೆ ಯಾಚಿಸಬೇಕು. ಮುಸ್ಲಿಂ ಮೀಸಲಾತಿ ರದ್ದು ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ತಕ್ಷಣ ವಾಪಸ್‌ ಪಡೆಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.