ADVERTISEMENT

ಲಕ್ಕಿ ಸ್ಕೀಂ ಹೆಸರಲ್ಲಿ ಆಕರ್ಷಕ ಬಹುಮಾನಗಳ ಆಮಿಷ; ₹ 4 ಕೋಟಿ ವಂಚನೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 13:51 IST
Last Updated 23 ಆಗಸ್ಟ್ 2025, 13:51 IST
<div class="paragraphs"><p>ಅಹಮ್ಮದ್ ಖುರೇಷಿ,&nbsp;ನಝೀರ್‌</p></div>

ಅಹಮ್ಮದ್ ಖುರೇಷಿ, ನಝೀರ್‌

   

ಮಂಗಳೂರು: ಲಕ್ಕಿ ಸ್ಕೀಂ ಹೆಸರಿನಲ್ಲಿ ಆಕರ್ಷಕ ಬಹುಮಾನಗಳ ಆಮಿಷ ತೋರಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವರಿಂದ ಒಟ್ಟು ₹ 4.20 ಕೋಟಿ ಪಡೆದು ವಂಚಿಸಿದ ಇಬ್ಬರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್‌ ಕಾಟಿಪಳ್ಳದ ಮಹಾಕಾಳಿ ದೇವಸ್ಥಾನ ಸಮೀಪದ ಅಬೂಬಕ್ಕರ್‌ ಅವರ ಮಗ ಅಹಮ್ಮದ್ ಖುರೇಶಿ (34) ಮತ್ತು ಸುರತ್ಕಲ್‌ ಕಾಟಿಪಳ್ಳದ ಕೋರ್ದಬ್ಬು ದ್ವಾರ ಸಮೀಪದ ನಿವಾಸಿ ಹಸನಬ್ಬ ಅವರ ಮಗ ನಝೀರ್ ಅಲಿಯಾಸ್ ನಾಸೀರ್ (39) ಬಂಧಿತರು.

ADVERTISEMENT

ಸುರತ್ಕಲ್‌ನ ಸೂರಿಂಜೆ ನಿವಾಸಿ ಶಿವಪ್ರಸಾದ್ ಅವರು ನೀಡಿದ ದೂರಿನಲ್ಲಿ, ಕಾಟಿಪಳ್ಳ 2ನೇ ಬ್ಲಾಕ್‌ನ ಆಯಿಷಾ ಕಟ್ಟಡದಲ್ಲಿ ಕಚೇರಿ ಹೊಂದಿದ್ದ ಅಹಮ್ಮದ್ ಖುರೇಷಿ ಮತ್ತು ನಝೀರ್ ನ್ಯೂ ಶೈನ್ ಎಂಟರ್‌ಪ್ರೈಸಸ್ ಎಂಬ ಲಕ್ಕಿ ಸ್ಕೀಂನಲ್ಲಿ 3 ಸಾವಿರ ಮಂದಿಯಿಂದ 9 ತಿಂಗಳು ತಲಾ ₹ 1 ಸಾವಿರ ಹಾಗೂ ಕೊನೆಯ 2 ತಿಂಗಳು ತಲಾ ₹ 1500 ‍ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.  

‘ಲಕ್ಕಿ ಡ್ರಾದಲ್ಲಿ ಕಾರು, ಬೈಕ್‌, ಪ್ಲ್ಯಾಟ್‌, ನಿವೇಶನ, ಚಿನ್ನದ ಉಂಗುರ ಮತ್ತು ನಗದು ಸಿಗುತ್ತದೆ ಎಂದು ಭರವಸೆ ನೀಡಿದ್ದ ಆರೋಪಿಗಳು ಮಾತು ಪಾಲಿಸದೆ, ಹಣವನ್ನೂ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಶಿವಪ್ರಸಾದ್ ದೂರಿದ್ದಾರೆ. ಸಂಬಂಧಪಟ್ಟವರಿಂದ ಅನುಮತಿ ಪಡೆಯದೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ವಂಚಿಸಿದ್ದು ಬಿಎನ್‌ಎಸ್ ಕಾಯ್ದೆಯ ಕಲಂ 316(2) ಹಾಗೂ 318(4) ಮತ್ತು ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆಯ ಕಲಂ 21ರ ಅನ್ವಯ ಪ್ರಕರಣ ದಾಖಲಿಸಿ ಆರೋಪಿಗಳನ್ನು ಆ.19ರಂದು ಬಂಧಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.‌

ಆರೋಪಿಗಳ ಕಚೇರಿಯಿಂದ ಕಂಪ್ಯೂಟರ್‌ಗಳು, ಡ್ರಾ ಕಾಯಿನ್, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್‌, ಡಿವಿಆರ್‌, ಬ್ಯಾಂಕ್ ಖಾತೆಗಳು, ಚಿನ್ನಾಭರಣ, ನಿವೇಶನದ ದಾಖಲೆಪತ್ರಗಳು, ವಾಹನ, ಮನೆ ವಶಪಡಿಸಿಕೊಳ್ಳಲಾಗಿದೆ. ಇವರ ಲಕ್ಕಿ ಸ್ಕೀಂನಲ್ಲಿ ಹಣ ತೊಡಗಿಸಿಕೊಂಡವರು ಹಾಗೂ ಹಣ ಸಂಗ್ರಹ ಮಾಡಿದವರು ದಾಖಲೆಗಳೊಂದಿಗೆ ಠಾಣೆಯಲ್ಲಿ ಹೇಳಿಕೆ ನೀಡಬೇಕು ಎಂದು ಕಮಿಷನರ್ ತಿಳಿಸಿದ್ದಾರೆ.

ಇವರಿಬ್ಬರು ಈ ಹಿಂದೆಯೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅಹಮ್ಮದ್ ಖುರೇಶಿ ಮೇಲೆ ಸುರತ್ಕಲ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣಗಳು, ಮಂಗಳೂರು ದಕ್ಷಿಣ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ, ನಝೀರ್ ಮೇಲೆ ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.