ADVERTISEMENT

ಚರ್ಮಗಂಟು: ರಾಜ್ಯದಲ್ಲಿ ಜಾನುವಾರು ಸಂತೆಗಳು ನಿಷೇಧ ಆಗುತ್ತವಾ?

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 15:58 IST
Last Updated 13 ಅಕ್ಟೋಬರ್ 2022, 15:58 IST
ಜಾನುವಾರು ಸಂತೆ
ಜಾನುವಾರು ಸಂತೆ   

ಬೆಂಗಳೂರು: ‘ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು ತಡೆಗಟ್ಟುವ ನಿಟ್ಟಿನಲ್ಲಿ ರೋಗ ಪತ್ತೆಯಾದ ಸುತ್ತಮುತ್ತ ಪ್ರದೇಶಗಳಲ್ಲಿ ಜಾನುವಾರು ಸಂತೆ ಮತ್ತು ಸಾಗಾಣಿಕೆಗೆ ನಿಷೇಧ ಹೇರಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದ್ದಾರೆ.

‘ಜಾನುವಾರು ಜಾತ್ರೆ, ಸಂತೆ ‌ಮತ್ತು ಸಾಗಾಣಿಕೆಯನ್ನು ನಿಷೇಧಿಸಲು ಆಯಾ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಚರ್ಮಗಂಟು ರೋಗಕ್ಕೆ ಕ್ಯಾಪ್ರಿಪಾಕ್ಸ್ ಹೆಸರಿನ ವೈರಾಣು ಮುಖ್ಯ ಕಾರಣ. ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ನೀಡಬೇಕು. ಲಸಿಕೆ ಪಡೆದ ಜಾನುವಾರುಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಮುಂಜಾಗ್ರತಾ ಕ್ರಮಗಳನ್ನು ಜಾನುವಾರು ಮಾಲೀಕರು ಅನುಸರಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

‘ಚರ್ಮಗಂಟು ರೋಗ ಕಾಣಿಸಿಕೊಂಡ ಪ್ರದೇಶ ಹಾಗೂ ಸುತ್ತಮುತ್ತಲಿನ 5 ಕಿ.ಮೀ. ಪ್ರದೇಶ ವ್ಯಾಪ್ತಿಯಲ್ಲಿ ಲಸಿಕೆ ನೀಡಲಾಗುತ್ತಿದೆ. ರೋಗಪೀಡಿತ ರಾಸುಗಳಿಂದ ಆರೋಗ್ಯವಂತ ರಾಸುಗಳನ್ನು ಬೇರ್ಪಡಿಸಿ, ಕೂಡಲೇ ಸ್ಥಳೀಯ ಪಶು ವೈದ್ಯರು ಇಲ್ಲವೇ ಸಹಾಯವಾಣಿ ಸಂಖ್ಯೆ 1962 ಅಥವಾ 8277100200 ಗೆ ಕರೆ ಮಾಡಿ‌ ಮಾಹಿತಿ ನೀಡಬೇಕು. ಇದರಿಂದ, ಪಶು ವೈದ್ಯರು ಚಿಕಿತ್ಸೆ ನೀಡಿ ರೋಗ ತಡೆಗಟ್ಟಲು ಸಹಕಾರಿಯಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

‘ನಿಶ್ಯಕ್ತಿಯಿಂದ ರಾಸುಗಳು ಸಾವಿಗೀಡಾಗುತ್ತಿವೆ. ರೋಗಪೀಡಿತ ರಾಸುಗಳು ನಿಶ್ಯಕ್ತವಾಗದಂತೆ ಎಳೆನೀರು, ರಾಗಿ ಅಂಬಲಿ, ರೋಗ ನಿರೋಧಕ ಮನೆಮದ್ದು ಔಷಧಗಳನ್ನು ನೀಡಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.