ADVERTISEMENT

ಮದ್ದೂರು ಹಿಂಸಾಚಾರಕ್ಕೆ ಗುಪ್ತಚರ ವೈಫಲ್ಯ ಕಾರಣ: ಬಿಜೆಪಿ ಸತ್ಯಶೋಧನಾ ವರದಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 15:33 IST
Last Updated 27 ಸೆಪ್ಟೆಂಬರ್ 2025, 15:33 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಬೆಂಗಳೂರು: ಮದ್ದೂರು ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಹಿಂಸಾಚಾರಕ್ಕೆ ಜಿಲ್ಲಾಡಳಿತ, ಪೊಲೀಸ್‌ ಹಾಗೂ ಗುಪ್ತಚರ ದಳದ ವೈಫಲ್ಯ ಕಾರಣ ಎಂದು ಬಿಜೆಪಿ ಸಿದ್ಧಪಡಿಸಿದ ಸತ್ಯಶೋಧನಾ ಸಮಿತಿ ವರದಿ ಹೇಳಿದೆ.

ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರರಾವ್, ಮುಖಂಡರಾದ ವೆಂಕಟೇಶ್‌ ದೊಡ್ಡೇರಿ, ವಿಜಯಪ್ರಸಾದ್, ಎನ್.ಎಸ್.ಇಂದ್ರೇಶ್‌, ಮಂಜುಳಾ, ಸ್ವಾಮಿಗೌಡ ಅವರಿದ್ದ ಸತ್ಯಶೋಧನಾ ಸಮಿತಿಯು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ವರದಿ ಸಲ್ಲಿಸಿತು.

ADVERTISEMENT

ನಂತರ ಮಾತನಾಡಿದ ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ, ‘ಮದ್ದೂರಿನಲ್ಲಿ 34 ವರ್ಷಗಳಿಂದ ಗಣಪತಿ ಉತ್ಸವ ನಡೆಯುತ್ತಿದ್ದು, ಯಾವ ವರ್ಷವೂ ಘರ್ಷಣೆ ಆಗಿರಲಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣಗೊಂಡ ಬಳಿಕ ಗಲಾಟೆಗೆ ಕುಮ್ಮಕ್ಕು ಕೊಟ್ಟಿದ್ದಾರೆ. ಅಕ್ರಮ ಮಸೀದಿ ವಿರುದ್ಧ ಕ್ರಮ ಜರುಗಿಸಬೇಕು. ಅಮಾನುಷವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಾಯಾಳುಗಳಿಗೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು. 

‘ಗಲಭೆಯ ಉದ್ದೇಶದಿಂದಲೇ ಪಟ್ಟಭದ್ರರು ಬೀದಿ ದೀಪ ನಂದಿಸಿದ್ದಾರೆ. ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಮೆರವಣಿಗೆ ಮಸೀದಿ ಮುಂಭಾಗ ತೆರಳುವಾಗ ಪೊಲೀಸರ ಸೂಚನೆಯಂತೆ ಮ್ಯೂಸಿಕ್‌, ಬ್ಯಾಂಡ್‌ಸೆಟ್‌ ಬಾರಿಸಿಲ್ಲ.  ಶಾಂತವಾಗಿ ಸಾಗುತ್ತಿದ್ದರೂ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ಐದು ಎಫ್‍ಐಆರ್ ದಾಖಲಿಸಿದ್ದಾರೆ. ಗಣಪತಿ ವಿಗ್ರಹವನ್ನು ವಶಕ್ಕೆ ಪಡೆದ ಪೊಲೀಸರೇ ವಿಸರ್ಜನೆ ಮಾಡಿದ್ದಾರೆ. ಪೊಲೀಸರು ಪೂರ್ವತಯಾರಿ ನಡೆಸದಿರುವುದು ಸತ್ಯಶೋಧನೆಯಲ್ಲಿ ಸಾಬೀತಾಗಿದೆ’ ಎಂದು ದೂರಿದರು.

ಬೀದಿಯಲ್ಲಿ ಹೋಗುವವರ ಮೇಲೂ ಲಾಠಿ ಚಾರ್ಜ್‌ ಮಾಡಲಾಗಿದೆ. ಮರುದಿನ ಕಾರ್ಯಕರ್ತರು ಮದ್ದೂರು ಬಂದ್ ಕರೆ ನೀಡಿದ್ದರು. ಜಿಲ್ಲೆಯ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ‘ಈ ಎಲ್ಲ ಘಟನೆಗೆ ಬಿಜೆಪಿ, ಆರ್‌ಎಸ್‌ಎಸ್‌, ಬಜರಂಗದಳ ಕಾರಣ’ ಎಂದು  ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದರು. ಮುಸ್ಲಿಂ ಮುಖಂಡ ಆದಿಲ್‌ ಅವರು ಈ ಘಟನೆಗೆ  ಮುಸ್ಲಿಂ ಯುವಕರೇ ಕಾರಣ ಎಂದು ಹೇಳಿದ್ದರು. ಬಳಿಕ ಚಲುವರಾಯಸ್ವಾಮಿ ಅವರೂ ಮುಸ್ಲಿಂ ಯುವಕರ ತಪ್ಪಿದೆ ಎಂದು ಒಪ್ಪಿಕೊಂಡರು. ಈ ರೀತಿ ಸಚಿವರೇ ಬೇಜವಾಬ್ದಾರಿ ನಡೆ ತೋರಿದ್ದರು ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.