ADVERTISEMENT

ಪಿಯು ಉಪನ್ಯಾಸಕರಿಗೆ ಬಡ್ತಿ ನೀಡಲಾಗುವುದು: ಮಧು ಬಂಗಾರಪ್ಪ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2023, 16:04 IST
Last Updated 23 ಆಗಸ್ಟ್ 2023, 16:04 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಬೆಂಗಳೂರು: ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಬಡ್ತಿ ನೀಡಿ, ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ನಗರದಲ್ಲಿ ಬುಧವಾರ ನಡೆದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಉಪನ್ಯಾಸಕರ ವರ್ಗಾವಣೆಗೆ ಪ್ರಸ್ತುತ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಯುತ್ತಿದೆ. ಆ. 24ಕ್ಕೆ ಪೂರ್ಣಗೊಳ್ಳಲಿದೆ. ನಂತರ ಬಡ್ತಿ ನೀಡುವ ಪ್ರಕ್ರಿಯೆ ಆರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ADVERTISEMENT

‘ಪದವಿಪೂರ್ವ ಕಾಲೇಜುಗಳಲ್ಲಿ ಕಳೆದ ಡಿಸೆಂಬರ್‌ ಅಂತ್ಯಕ್ಕೆ 192 ಪ್ರಾಂಶುಪಾಲರ ಹುದ್ದೆಗಳು ಖಾಲಿಯಾಗಿವೆ. ಈಗ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಸೇವಾ ಹಿರಿತನದ ಆಧಾರದಲ್ಲಿ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡಬೇಕು. ಪ್ರೌಢಶಾಲೆಗಳಿಂದ ಬಡ್ತಿ ಪಡೆದ ಉಪನ್ಯಾಸಕರ ವೇತನ ಶ್ರೇಣಿಯಲ್ಲಿನ ವ್ಯತ್ಯಾಸ ಸರಿಪಡಿಸಬೇಕು. ಬಡ್ತಿ ಪಡೆದವರಿಗೆ ಅವರ ಸಮಕಾಲೀನ ಪ್ರೌಢಶಾಲಾ ಶಿಕ್ಷಕರಿಗಿಂತ ಕಡಿಮೆ ವೇತನ ಸಿಗುತ್ತಿದೆ. ತಾರತಮ್ಯ ಸರಿಪಡಿಸಲು 6ನೇ ವೇತನ ಆಯೋಗವೂ ಸೂಚಿಸಿದೆ. ಆದರೆ, ಇದುವರೆಗೂ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. 2008ರ ನಂತರ ನೇಮಕವಾದ ಉಪನ್ಯಾಸಕರಿಗೆ ವಿಶೇಷ ಭತ್ಯೆ ಸೌಲಭ್ಯ ಕಲ್ಪಿಸಿಲ್ಲ’ ಎಂದು ಸಂಘದ ಅಧ್ಯಕ್ಷ ಎ.ಎಚ್‌.ನಿಂಗೇಗೌಡ ಸಚಿವರ ಗಮನ ಸೆಳೆದರು.

ವೇತನ ತಾರತಮ್ಯ ಸರಿಪಡಿಸುವ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. 7ನೇ ವೇತನ ಆಯೋಗದ ವರದಿ ಬಂದ ನಂತರ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಧು ಬಂಗಾರಪ್ಪ ಭರವಸೆ ನೀಡಿದರು.

ಅನುದಾನಿತ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಇಡಿ ಪದವಿ ಪಡೆಯದ ಒಂದು ಸಾವಿರ ಉಪನ್ಯಾಸಕರಿಗೆ ವೇತನ ಸಹಿತ ರಜೆ ನೀಡಿ, ಬಿ.ಇಡಿ ಪೂರ್ಣಗೊಳಿಸಲು ಅವಕಾಶ ಮಾಡಿಕೊಡುವ ಕುರಿತು ಪರಿಶೀಲಿಸಲಾಗುವುದು ಎಂದರು.

ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್ ಸಿಂಗ್, ಆಯುಕ್ತೆ ಬಿ.ಬಿ.ಕಾವೇರಿ, ಪದವಿಪೂರ್ವ ಶಿಕ್ಷಣ  ಇಲಾಖೆ ನಿರ್ದೇಶಕಿ ಸಿಂಧು ರೂಪೇಶ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶ್ರೀಕಂಠೇಗೌಡ, ಉಪನ್ಯಾಸಕರ ಸಂಘದ ಪದಾಧಿಕಾರಿಗಳಾದ ಎಸ್‌.ಆರ್.ವೆಂಕಟೇಶ್‌, ಶಿವರಾಜ್ ಮಾಲಿ ಪಾಟೀಲ, ಎಂ.ಜಯಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.