ADVERTISEMENT

ಜೆಡಿಎಸ್‌ನಲ್ಲೇ ಇದ್ದೇನೆ, ಮುಂದೇನೋ ಗೊತ್ತಿಲ್ಲ: ಮಧು ಬಂಗಾರಪ್ಪ 

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 8:14 IST
Last Updated 2 ಮಾರ್ಚ್ 2020, 8:14 IST
ಮಾಜಿ ಶಾಸಕ ಮಧು ಬಂಗಾರಪ್ಪ
ಮಾಜಿ ಶಾಸಕ ಮಧು ಬಂಗಾರಪ್ಪ   

ಬೆಂಗಳೂರು: ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಜೆಡಿಎಸ್‌ ವಿರುದ್ಧ ಬಹಿರಂಗವಾಗಿಯೇ ಅಸಮಾದಾನ ವ್ಯಕ್ತಪಡಿಸಿದ್ದಾರೆ. ನಾನು ಪಕ್ಷದಲ್ಲಿ ಕ್ರಿಯಾಶೀಲನಲ್ಲದ ನಾಯಕ ಎಂದೂ ಅವರು ಹೇಳಿಕೊಂಡಿದ್ದಾರೆ.

ಸೋಮವಾರ ಅವರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಕಾರ್ಯಕರ್ತರನ್ನು ನಾವು ಕಳೆದುಕೊಂಡೆವು. ನಾವು ಕಾರ್ಯಕರ್ತರಿಗೆ ಸರಿಯಾಗಿ ಸ್ಫಂದಿಸಿಲ್ಲ. ನಾನು ಆಗ ಸೋತಿದ್ದೆ. ಬಂಗಾರಪ್ಪ ಎನ್ನುವುದು ನನಗೆ ಇರುವ ದೊಡ್ಡ ಹೆಸರು. ಅದಕ್ಕಿಂತ ದೊಡ್ಡ ಹೆಸರು ಏನೂ ನನಗೆ ಬೇಕಿಲ್ಲ. ವಿಶ್ವನಾಥ್ ಅವರು ನನ್ನನ್ನು ಕಾರ್ಯಧ್ಯಕ್ಷನನ್ನಾಗಿ ಮಾಡೋಕೆ ಹೇಳಿದ್ದರು.ವಿಶ್ವನಾಥ್ ಮತ್ತು ಕುಮಾರಸ್ವಾಮಿ ನಡುವೆ ಇದ್ದವರು ಅವರಿಬ್ಬರ ನಡುವಿನ ಸಂಬಂಧ ಹಾಳು ಮಾಡಿದರು. ಆಗ ಕುಮಾರಸ್ವಾಮಿ ಯುಎಸ್ ನಲ್ಲಿದ್ದರು. ಕುಮಾರಸ್ವಾಮಿ ಅವರು ವಿಶ್ವನಾಥ್ ಅವರ ಜೊತೆ ಮಾತನಾಡಿದ್ದಿದ್ದರೆವಿಶ್ವನಾಥ್ ಪಕ್ಷ ಬಿಡುತ್ತಿರಲಿಲ್ಲ. ವಿಶ್ವನಾಥ್ ಅವರು ಯಾಕೆ ಹೋದರು ಎಂದು ನಾನು ಹೆಚ್ಚು ಮಾತನಾಡುವುದಿಲ್ಲ,’ ಎಂದು ಮಧು ಬಂಗಾರಪ್ಪ ಹೇಳಿದರು.

ಕ್ರಿಮಿನಲ್ ರೆಕಾರ್ಡ್ ಇರುವ ರಮೇಶ್ ಗೌಡಗೆ ಎಂಎಲ್ ಸಿ ಪಟ್ಟ ಕೊಡಲಾಯಿತು. ಇದನ್ನೇ ಪಕ್ಷದ ಕಾರ್ಯಕರ್ತರಿಗೆ ಕೊಟ್ಟಿದ್ದಿದ್ದರೆ ಒಳ್ಳೆಯದಾಗುತ್ತಿತ್ತು. ರಮೇಶ್ ಗೌಡಗೆ ಎಂಎಲ್ ಸಿ ಮಾಡಬಾರದಿತ್ತು. ವಿಶ್ವನಾಥ್ ರವರಿಗೆ ಸಚಿವ ಸ್ಥಾನ ಕೊಟ್ಟಿದ್ದರೆ ಅವರು ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ ಎಂದರು.

ADVERTISEMENT

ಲೋಕಸಭಾ ಚುನಾವಣೆ ಬಳಿಕ ‌ನಾನು ಮಾಧ್ಯಮಗಳಿಂದ ದೂರ ಉಳಿದೆ. ಇದು ಪಕ್ಷದ ಕಾರಣಕ್ಕಾಗಿ ಅಲ್ಲ. ವೈಯಕ್ತಿಕವಾಗಿಯೇ ನಾನು ದೂರ ಇದ್ದೆ.ನನಗೆ‌ ಮನಸಿಗೆ ನೋವಾಗಿದೆ. ಕಾರ್ಯಕರ್ತರಿಗೂ ನೋವಾಗಿದೆ. ಪಕ್ಷದಲ್ಲಿ ಕಾರ್ಯಕರ್ತರಿಗೆ ಸ್ಪಂದನೆ ಇರದೇ ಇರುವುದು ಬೇಸರದ ಸಂಗತಿ. ಜೆಡಿಎಸ್ ಕಾರ್ಯಕರ್ತರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದರು.

‘ಧರ್ಮೇಗೌಡ ಪಕ್ಷ ಬಿಟ್ಟು ಹೋಗಲು ಮುಂದಾಗಿದ್ದರು. ಅವರನ್ನೂ ಆಗ ಎಂ ಎಲ್ ಸಿ ಮಾಡಬಾರದಿತ್ತು. ರಮೇಶ್ ಗೌಡ ಅವರನ್ನು ಪರಿಷತ್ ಗೆ ಆಯ್ಕೆ ಮಾಡುವಾಗ ನಮ್ಮ ಸಲಹೆ ಕೇಳಲ್ಲಿಲ್ಲ. ಪರಿಷತ್ ಆಯ್ಕೆ ಸಂದರ್ಭದಲ್ಲಿ ಬೇರೆಯದೇ ಹೆಸರು ಇತ್ತು. ಆದರೆ, ರಮೇಶ್‌ ಗೌಡ ಅವರನ್ನು ಆಯ್ಕೆ ಮಾಡಲಾಯಿತು,’ ಎಂದು ಪರಿಷತ್‌ ಸ್ಥಾನದ ಆಯ್ಕೆಯ ಹಿಂದಿನ ವಿಚಾರವನ್ನು ಬಹಿರಂಗಪಡಿಸಿದರು.

‘ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಅವರ ಅಕ್ಕ ಪಕ್ಕಎಂ.ಪಿ‌. ಪ್ರಕಾಶ್, ಹೊರಟ್ಟಿ ಅಂಥವರು ಇರುತ್ತಿದ್ದರು. ಆದರೆ, ಈಗ ಅವರ ಅಕ್ಕಪಕ್ಕದಲ್ಲಿ ಇರುವವರು ಎಂಥವರು ಎಂದು ಪ್ರಶ್ನಿಸಿದ ಮಧು, ಮಾತನಾಡೋಕೆ ಯೋಗ್ಯತೆ ಇಲ್ಲದವರಿಗೆ ಅಧಿಕಾರ ಕೊಟ್ಟರು ಎಂದು ಆರೋಪಿಸಿದರು.

‘ನನಗೆ ಇನ್ನೂ ಸರಿಯಾದ ವೇದಿಕೆ ಸಿಕ್ಕಿಲ್ಲ. ವೇದಿಕೆ ಸಿಕ್ಕರೆ ಮಾತನಾಡುತ್ತೇನೆ,’ ಎಂದೂ ಅವರು ಗುಡುಗಿದ್ದಾರೆ.

ಲೋಕಸಭೆ ಚುನಾವಣೆಗೆ ನಿಲ್ಲಬಾರದು ಎಂದೇ ನಾನು ಯೋಚಿಸಿದ್ದೆ. ದೇವೇಗೌಡರ ಒತ್ತಾಯದ ಮೆರೆಗೆ ಒಪ್ಪಿಕೊಂಡೆ ಎಂದು ಅವರು ತಿಳಿಸಿದರು.

ಪಕ್ಷದ ನಾಯಕರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಗೊಂದಲ ಬಗೆಹರಿಸಲು ಮುಂದಾಗದಿದ್ದರೆ ಮುಂದರ ದೊಡ್ಡ ಮಟ್ಟದ ಅನಾಹುತ ಆಗಬಹುದು. ಸದ್ಯ ನಾನು ಇನ್ ಆ್ಯಕ್ಟಿವ್ ಜೆಡಿಎಸ್ ಪಾರ್ಟಿ ಲೀಡರ್. ಮುಂದೆ ಆ್ಯಕ್ಟೀವ್ ಆಗೋಕೆ ಪ್ರಯತ್ನಿಸ್ತೇನೆ. ಇನ್ನೂ ಬೆಳೆಯುವ ಆಸೆ ಇದೆ.ನನ್ನನ್ನೂ ಸೇರಿ ಹಲವು ನಾಯಕರು ಓಪನ್ ಆಗಿ ಮಾತಾಡ್ಬೇಕಿತ್ತು. ಆದರೆ ನಾವು ಆ ಸಂದರ್ಭದಲ್ಲಿ ಮೌನವಾಗಿದ್ದೆವು ಎಂದು ಬೇಸರ ವ್ಯಕ್ತಪಡಿಸಿದರು.

‘ಹೋಗುವವರು ಹೋಗಲಿ ಎಂದುಅಂತ ಕುಮಾರಸ್ವಾಮಿ ಹೇಳಬಾರದಿತ್ತು’ ಎಂದೂ ಅವರು ಹೇಳಿದರು.

‘ಜೆಡಿಎಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವಿರಾ’ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜೀನಾಮೆ ಕೇಳಿದಾಗ ಕೊಡುತ್ತೇನೆ, ಇಲ್ಲಾ ನನ್ನನ್ನು ಅವರೇ ತೆಗೆದುಹಾಕಬಹುದು,’ ಎಂದು ತಿಳಿಸಿದರು.

‘ಇರುವವರನ್ನು ಉಳಿಸಿಕೊಳ್ಳೋದೇ ನಮಗೆ ದೊಡ್ಡ ಸಾಹಸ.ಕಾರ್ಯಕರ್ತರನ್ನು ಹೇಗೆ ವಿಶ್ವಾಸಕ್ಕೆ ತೆಗೆದ್ಕೊಳ್ಬೇಕು ಅನ್ನೋದು ಮೊದಲ ಸವಾಲು. ಮತದಾರರನ್ನು ಸೆಳೆಯೋದು ಎರಡನೇ ವಿಷಯ,’ ಎಂದಿದ್ದಾರೆ ಮಧು.

‘ಗೋಪಾಲಯ್ಯ, ನಾರಾಯಣಗೌಡ ಅವರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ವಿಶ್ವಾಸದ ಕೊರತೆಯಿಂದ ವಿಶ್ವನಾಥ್ ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ಹೊರಟ್ಟಿ ಸಭಾಪತಿ ಸ್ಥಾನದಿಂದ ಬಹಳ ದುಃಖದಿಂದಲೇ ಇಳಿದರು,’ ಎಂದು ಅವರು ಹೇಳಿದರು.

ರಮೇಶ್ ಗೌಡ ಒಬ್ಬ ಯೂಸ್ ಲೆಸ್ ಫೆಲೊ ಎಂದೂ ಮಧು ಬಂಗಾರಪ್ಪ ಅವರು ಕಿಡಿ ಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.