ADVERTISEMENT

ನಾಯಕತ್ವದ ಬಿಕ್ಕಟ್ಟು ದೆಹಲಿಗೆ

ವಿರೋಧ ಪಕ್ಷದ ನಾಯಕ ಸ್ಥಾನ: ಸಿದ್ದರಾಮಯ್ಯ ಪರ–ವಿರೋಧ ಬಣಗಳ ಅಹವಾಲು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 20:28 IST
Last Updated 6 ಅಕ್ಟೋಬರ್ 2019, 20:28 IST
   

ಬೆಂಗಳೂರು: ಸಿದ್ದರಾಮಯ್ಯ ಅವರಿಗೆವಿರೋಧ ಪಕ್ಷದ ನಾಯಕ ಸ್ಥಾನ ನೀಡಬಾರದು ಎಂದು ಮೂಲ ಕಾಂಗ್ರೆಸ್ಸಿಗರು ಪಟ್ಟು ಹಿಡಿದರೆ, ವಿರೋಧ ಪಕ್ಷದ ನಾಯಕ ಸ್ಥಾನದ ಜತೆಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನೂ ನೀಡಬೇಕು ಎಂದು ಸಿದ್ದರಾಮಯ್ಯ ಬೆಂಬಲಿಗರುಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿಗೆ ಒತ್ತಡ ಹಾಕಿದರು.

ವಿರೋಧ ಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಕುರಿತಂತೆ ಮಧುಸೂದನ ಮಿಸ್ತ್ರಿ ಭಾನುವಾರ ಬೆಳಗಿನಿಂದ ಸಂಜೆಯವರೆಗೆ ನಗರದ ರ್‍ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್‌ನ 63 ಪ್ರಮುಖರ ಅಭಿಪ್ರಾಯ ಸಂಗ್ರಹಿಸಿದರು. ಇವರಲ್ಲಿ 22 ಶಾಸಕರು, 28 ಮಾಜಿ ಸಂಸದರು, 6 ವಿಧಾನ ಪರಿಷತ್ ಸದಸ್ಯರು
ಇದ್ದರು. ಇವರೆಲ್ಲರ ಅಭಿಪ್ರಾಯ ಸಂಗ್ರಹಿಸಿರುವ ಮಿಸ್ತ್ರಿ, ಈ ಕುರಿತು ವಿಸ್ತೃತ ವರದಿಯನ್ನು ಹೈಕಮಾಂಡ್‌ಗೆ ನೀಡಲಿದ್ದಾರೆ.

ಈ ಬೆಳವಣಿಗೆಯಿಂದ ನಾಯಕತ್ವದ ಬಿಕ್ಕಟ್ಟು ದೆಹಲಿಗೆ ತಲುಪಿದ್ದು, ಕಾಂಗ್ರೆಸ್‌ನಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಹುದ್ದೆಗೆ ನಡೆದಿರುವ ಪೈಪೋಟಿ ತಾರಕಕ್ಕೇರಿದೆ.

ADVERTISEMENT

ಪಕ್ಷದ ಹಿರಿಯ ನಾಯಕರಾದ ಕೆ.ಎಚ್‌.ಮುನಿಯಪ್ಪ, ಎಚ್‌.ಕೆ.ಪಾಟೀಲ, ಬಿ.ಕೆ.ಹರಿಪ್ರಸಾದ್ ಮತ್ತು ಜಿ.ಪರಮೇಶ್ವರ ಬೆಂಬಲಿಗರು, ‘ರಾಜ್ಯದಲ್ಲಿ ಪಕ್ಷ ಉಳಿಯಬೇಕೆಂದರೆ ಎಚ್.ಕೆ.ಪಾಟೀಲ ಅಥವಾ ಡಾ. ಜಿ.ಪರಮೇಶ್ವರ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಬೇಕು’ ಎಂದು ಮಿಸ್ತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟರು.

‘2018ರ ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆಯನ್ನು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಲಾಯಿತು. ಈ ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲು ಅವರೇ ಕಾರಣ. ಸಮ್ಮಿಶ್ರ ಸರ್ಕಾರದ ಪತನಕ್ಕೂ ಸಿದ್ದರಾಮಯ್ಯ ಅವರ ಬೆಂಬಲಿಗರು ನೆರವಾಗಿದ್ದಾರೆ’ ಎಂದು ದೂರಿದರು.

ಇದಕ್ಕೆ ಪ್ರತಿಯಾಗಿ, ‘ಸಿದ್ದರಾಮಯ್ಯ ನಾಯಕತ್ವ ಪಕ್ಷಕ್ಕೆ ಅನಿವಾರ್ಯ’ ಎಂದು 52 ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರು ಸಹಿ ಹಾಕಿದ ಪತ್ರವನ್ನು ಸಿದ್ದರಾಮಯ್ಯ ಬೆಂಬಲಿಗರು ನೀಡಿದರು.ಕೆಪಿಸಿಸಿ ಅಧ್ಯಕ್ಷದಿನೇಶ್ ಗುಂಡೂರಾವ್ ವಿದೇಶ ಪ್ರವಾಸದಲ್ಲಿದ್ದ ಕಾರಣ ಹಾಜರಾಗಿರಲಿಲ್ಲ.

7 ಸ್ಥಾನಕ್ಕೆ ಆಯ್ಕೆ
ಅಧಿವೇಶನ ಆರಂಭಕ್ಕೂ ಮುನ್ನ ಕಾಂಗ್ರೆಸ್‌ ತನ್ನ ಶಾಸಕಾಂಗ ಪಕ್ಷದ ನಾಯಕ, ವಿರೋಧ ಪಕ್ಷದ ನಾಯಕ, ಉಪ ನಾಯಕ, ಮುಖ್ಯ ಸಚೇತಕ, ವಿಧಾನ ಪರಿಷತ್‌ ನಾಯಕ, ಉಪ ನಾಯಕ ಹಾಗೂ ಮುಖ್ಯ ಸಚೇತಕ ಸ್ಥಾನಗಳಿಗೆ ನಾಯಕರನ್ನು ಆಯ್ಕೆ ಮಾಡಬೇಕಿದೆ.

ಮೌನ ಪ್ರತಿಭಟನೆ
ಕಾಂಗ್ರೆಸ್‌ನ ಹಿರಿಯ ನಾಯಕ ಎಚ್.ಹನುಮಂತಪ್ಪ, ‘ಕಾಂಗ್ರೆಸ್‌ನವರಿಗೆ ಕಾಂಗ್ರೆಸ್‌ ಉಳಿಸುವ ಬುದ್ಧಿ ಕೊಡು ಭಗವಂತಾ’ ಎಂಬ ಬ್ಯಾನರ್‌ ಅನ್ನು ಕೆಪಿಸಿಸಿ ಕಚೇರಿಯ ಮುಖ್ಯ ದ್ವಾರಕ್ಕೆ ಕಟ್ಟಿ ಅಲ್ಲೇ ಇದ್ದ ಬೆಂಚ್ ಮೇಲೆ ಕುಳಿತು ಕೆಲ ಹೊತ್ತು ಮೌನ ಆಚರಿಸಿದರು.
‘ಇಂದು ಪಕ್ಷದಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸುವಂತಹ ಪರಿಸ್ಥಿತಿ ತಲೆದೋರಿದೆ. ಪಕ್ಷ ಉಳಿಸಬೇಕಾಗಿದೆ’ ಎಂದರು.

***

-ಅ. 10ರಿಂದ ಆರಂಭ ವಿಧಾನಮಂಡಲ ಅಧಿವೇಶನ

-ಅ. 9ರಂದು ವಿರೋಧ ಪಕ್ಷದ ನಾಯಕನ ಆಯ್ಕೆ

-ಸಿದ್ದರಾಮಯ್ಯ ಬೆಂಬಲಿಗರಿಂದ ಸಹಿ ಸಂಗ್ರಹ

***

ಮಿಸ್ತ್ರಿ ಅವರ ಜೊತೆ ನಡೆದ ಸಂವಾದದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಸ್ತಾಪ ಆಗಿಲ್ಲ. ಎಲ್ಲರೂ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ.
- ಕೆ.ಎಚ್‌.ಮುನಿಯಪ್ಪ, ಕಾಂಗ್ರೆಸ್‌ ಹಿರಿಯ ನಾಯಕ

***

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಒಂದೇ ಸ್ಥಾನ ಗೆದ್ದಿದೆ. ಆದ್ದರಿಂದ ಪಕ್ಷದ ನಾಯಕತ್ವದಲ್ಲಿ ಸಾಮೂಹಿಕ ಬದಲಾವಣೆ ಆಗಬೇಕು
- ರಾಮಲಿಂಗಾರೆಡ್ಡಿ, ಕಾಂಗ್ರೆಸ್‌ ಶಾಸಕ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.