ADVERTISEMENT

ಅಧಿಕಾರ ಕೊಟ್ಟವರ ಜೊತೆಗೆ ಮಾದಿಗ ಸಮಾಜ: ಷಡಕ್ಷರಿ ಮುನಿಸ್ವಾಮಿ ದೇಶಿಕೇಂದ್ರ ಶ್ರೀ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 19:33 IST
Last Updated 28 ಫೆಬ್ರುವರಿ 2021, 19:33 IST
ಷಡಕ್ಷರಿ ಮುನಿಸ್ವಾಮಿಶ್ರೀ
ಷಡಕ್ಷರಿ ಮುನಿಸ್ವಾಮಿಶ್ರೀ   

ಕಲಬುರ್ಗಿ: ‘ಯಾರು ನಮ್ಮನ್ನು ಅಪ್ಪಿಕೊಂಡು ಅಧಿಕಾರ ನೀಡುತ್ತಾರೋ, ನಾವು ಅವರ ಪರ ನಿಲ್ಲುತ್ತೇವೆ. ಯಾರು ನಮ್ಮನ್ನು ದೂರ ಸರಿಸುತ್ತಾರೋ, ನಾವೂ ಅವರನ್ನು ದೂರ ಸರಿಸುತ್ತೇವೆ‘ ಎಂದು ಹಿರಿಯೂರು ಆದಿಜಾಂಬವ ಮಠದ ಷಡಕ್ಷರಿ ಮುನಿಸ್ವಾಮಿ ದೇಶಿಕೇಂದ್ರ ಶ್ರೀಗಳು ತಿಳಿಸಿದರು.

ದಲಿತ ಮಾದಿಗ ಸಮನ್ವಯ ಸಮಿತಿಯು ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಸಮುದಾಯದ ನೂತನ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅಪಮಾನ, ಹಸಿವು ಎಲ್ಲವನ್ನೂ ಮಾದಿಗ ಸಮಾಜ ಶತಮಾನಗಳಿಂದ ಅನುಭವಿಸುತ್ತಿದೆ. ಈಗಲಾದರೂ ಅಧಿಕಾರ ನಮ್ಮ ಸಮುದಾಯಕ್ಕೆ ಸಿಗಬೇಕು. ಆ ಅಧಿಕಾರ ಕೊಡುವ ಮುಖಂಡರ ಬೆನ್ನಿಗೆ ಸಮುದಾಯ ನಿಲ್ಲಲಿದೆ’ ಎಂದರು.

‘ಎ.ಜೆ. ಸದಾಶಿವ ಆಯೋಗದ ವರದಿ ಸಲ್ಲಿಕೆಯಾಗಿ 8 ವರ್ಷಗಳಾದರೂ ಅದನ್ನು ಅಂಗೀಕರಿಸುವ ಬಗ್ಗೆ ಯಾವ ಸರ್ಕಾರವೂ ಮಾತನಾಡುತ್ತಿಲ್ಲ.ಬಹುಶಃ ಈ ವರದಿ ಕಸದ ಬುಟ್ಟಿ ಸೇರಬಹುದು’ ಎಂದು ಆತಂಕವ್ಯಕ್ತಪಡಿಸಿದರು.

ADVERTISEMENT

ಮಾಜಿ ಸಚಿವ ಕೆ.ಬಿ. ಶಾಣಪ್ಪ ಮಾತನಾಡಿ, ‘ಶತಮಾನಗಳಿಂದ ಊರನ್ನು ಸ್ವಚ್ಛಗೊಳಿಸಿರುವ ಮಾದಿಗರು ಗೌಡರಿಗೆ ಚಪ್ಪಲಿ, ರೈತರಿಗೆ ಬಾರುಕೋಲು ಮಾಡಿಕೊಟ್ಟಿದ್ದಾರೆ. ಆದರೂ ರಾಜಕೀಯವಾಗಿ ನಮ್ಮ ಸಮುದಾಯಗಳನ್ನು ತುಳಿಯಲಾಗುತ್ತದೆ. ಗೌಡರ ಮನೆಯ ಚಾಕರಿ ಮಾಡಿಕೊಂಡವರನ್ನು ಬಿಟ್ಟು ಬಂಜಾರ ಸಮುದಾಯದವರನ್ನು ಗೆಲ್ಲಿಸಿಕೊಂಡು ಬರಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.