ಕಾರ್ಯಕ್ರಮದಲ್ಲಿ ತಮಿಳ್ ಸೆಲ್ವಿ ಅವರಿಗೆ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರತಿಭಾ ನಂದಕುಮಾರ್, ಮಲ್ಲೇಪುರಂ ಜಿ. ವೆಂಕಟೇಶ್, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‌ನ ವ್ಯವಸ್ಥಾಪಕ ಬಿ.ಕೆ. ಸುರೇಶ್, ಕುಂ. ವೀರಭದ್ರಪ್ಪ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಪ್ರಕಟಗೊಂಡ ಅನೇಕ ಕೃತಿಗಳನ್ನು ಓದಿದ್ದೇನೆ. ಕನ್ನಡ ಭಾಷೆಯಲ್ಲಿರುವ ಸತ್ವ ತಮಿಳು ಭಾಷೆಯಲ್ಲಿಲ್ಲ’ ಎಂದು ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ತಮಿಳ್ ಸೆಲ್ವಿ ಅಭಿಪ್ರಾಯಪಟ್ಟರು.
ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಮತ್ತು ಪ್ರೊ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಜಂಟಿಯಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಸಂಪಾದಿಸಿರುವ ‘ದೇವುಡು ಹೇಳಿದ ಮಕ್ಕಳ ಕಥೆಗಳು’ ಶೀರ್ಷಿಕೆಯಡಿ ಐದು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಇದೇ ವೇಳೆ ತಮಿಳ್ ಸೆಲ್ವಿ ಅವರು ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ, ಮಾತನಾಡಿದರು.
‘ಕಮಲ್ ಹಾಸನ್ ಅವರು ಅವಿವೇಕಿತನದ ಹೇಳಿಕೆ ನೀಡಿದ್ದಾರೆ. ಒಂದು ಭಾಷೆ ಇನ್ನೊಂದು ಭಾಷೆಯಿಂದ ಹೇಗೆ ಹುಟ್ಟುತ್ತದೆ ಎಂಬ ಕಲ್ಪನೆಯೂ ಅವರಿಗಿಲ್ಲ. ಭಾಷೆಯ ಬಗ್ಗೆ ಸಂಶೋಧನೆ ನಡೆಸದೆ ಹೇಳಿಕೆ ನೀಡಿದ್ದಾರೆ. ಯಾರೋ ಬ್ರಿಟಿಷ್ ವಿದ್ವಾಂಸರು ಅರಿವಿಲ್ಲದೆ ಕೆಲ ತಪ್ಪುಗಳನ್ನು ಬರೆದಿದ್ದಾರೆ. ಅದನ್ನು ವಿಮರ್ಶಿಸಿಲ್ಲ. ಅದೇ ವಿದ್ವಾಂಸರು ಸಂಸ್ಕೃತದಿಂದ ತಮಿಳು ಭಾಷೆ ಹುಟ್ಟಿದೆ ಎಂದಿದ್ದಾರೆ. ಆದರೆ, ಅದನ್ನು ಒಪ್ಪಿಕೊಳ್ಳಲು ಅವರು ಸಿದ್ಧವಿಲ್ಲ. ಭಾಷಾ ಅಭಿಮಾನದಿಂದ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ’ ಎಂದರು.
‘ಅನುವಾದದ ಮೂಲಕ ಭಾರತೀಯ ಭಾಷೆಗಳ ಎಲ್ಲ ಸಾಹಿತ್ಯವನ್ನು ಓದಿಕೊಂಡಿದ್ದೇನೆ. ಕನ್ನಡದಷ್ಟೇ ತಮಿಳು ಸಾಹಿತ್ಯವನ್ನೂ ತಿಳಿದುಕೊಂಡಿದ್ದೇನೆ. ಕನ್ನಡ ಭಾಷೆಯಲ್ಲಿರುವ ವೈವಿಧ್ಯಮಯ ಸಾಹಿತ್ಯ ಆ ಭಾಷೆಯಲ್ಲಿಲ್ಲ. ಪಂಪ, ರನ್ನ, ಕುಮಾರವ್ಯಾಸರು ರಚಿಸಿದ ಕಾವ್ಯಗಳನ್ನು ಆ ಭಾಷೆಯಲ್ಲಿ ನೋಡಲು ಸಾಧ್ಯವಿಲ್ಲ’ ಎಂದು ಹೇಳಿದರು.
ಸಾಹಿತಿ ಕುಂ. ವೀರಭದ್ರಪ್ಪ, ‘ವಿವಿಧ ಕಾರಣಗಳಿಂದಾಗಿ ನಾನು ಏಳು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿರಲಿಲ್ಲ. ಹಿಂದೆ ಅಧ್ಯಕ್ಷರನ್ನು ಭೇಟಿ ಮಾಡಲಾದರೂ ಬರುತ್ತಿದ್ದೆ. ಈಗ ಅಧ್ಯಕ್ಷರೇ ಬಾಸ್‌ಗಳಾಗುತ್ತಿದ್ದಾರೆ. ಮಲ್ಲೇಪುರಂ ಅವರ ಮೇಲಿನ ಅಭಿಮಾನದಿಂದ ನಾನು ಹಾಕಿಕೊಂಡ ಲಕ್ಷ್ಮಣ ರೇಖೆಯನ್ನು ದಾಟಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಬರಬೇಕಾಯಿತು. ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದ ಮಲ್ಲೇಪುರಂ ಅವರು, ಮುಂದೆ ಸಂಸ್ಕೃತ ವಿಶ್ವವಿದ್ಯಾಲದ ಕುಲಪತಿಯಾದದ್ದು ಪವಾಡದಂತೆ ಭಾಸವಾಗಲಿದೆ’ ಎಂದು ಹೇಳಿದರು.
ಕವಯಿತ್ರಿ ಪ್ರತಿಭಾ ನಂದಕುಮಾರ್, ‘ದೇವುಡು ಹೇಳಿದ ಮಕ್ಕಳ ಕಥೆಗಳು ಬೆರಗು ಹುಟ್ಟಿಸಲಿವೆ. ಅವನ್ನು ಮಕ್ಕಳಿಗೆ ತಲುಪಿಸುವುದು ನಮ್ಮ ಕರ್ತವ್ಯ’ ಎಂದರು.
ಕಮಲ್ ಹಾಸನ್ ಅವರ ಅವಿವೇಕತನದ ಹೇಳಿಕೆ ಕರ್ನಾಟಕವನ್ನು ಕಾದ ಕಾವಲಿ ಮೇಲೆ ಇರಿಸಿದೆ. ಅವರಿಗೆ ನ್ಯಾಯಾಲಯವೇ ಛೀಮಾರಿ ಹಾಕಿದೆ. ಆದ್ದರಿಂದ ನಾವು ಛೀಮಾರಿ ಹಾಕುವ ಅಗತ್ಯವಿಲ್ಲ.–ಕುಂ. ವೀರಭದ್ರಪ್ಪ, ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.