ADVERTISEMENT

ಮಹದಾಯಿ ಯೋಜನೆ ತಡೆಯಲಿ ನೋಡೋಣ: ಡಿ.ಕೆ. ಶಿವಕುಮಾರ್

ಶೀಘ್ರ ಕಾಮಗಾರಿ ಆರಂಭ | ಗೋವಾ ಸರ್ಕಾರಕ್ಕೆ ಡಿಕೆಶಿ ಬಹಿರಂಗ ಸವಾಲು

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 22:30 IST
Last Updated 24 ಜುಲೈ 2025, 22:30 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಹಿಂಪಡೆದು ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆ. ಗೋವಾ ಸರ್ಕಾರ ತಡೆಯಲಿ, ನಾನೂ ನೋಡುತ್ತೇನೆ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘ಮಹದಾಯಿ ಯೋಜನೆ ಆರಂಭಿಸಲು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದರು. ಇದಕ್ಕೆ, ಗುರುವಾರ ಪ್ರತಿಕ್ರಿಯಿಸಿದ ಶಿವಕುಮಾರ್, ‘ಕರ್ನಾಟಕಕ್ಕೆ ನೋಟಿಸ್ ನೀಡಲು ಗೋವಾದವರಿಗೆ ಹಕ್ಕಿಲ್ಲ. ಏನೇ ನೋಟಿಸ್ ನೀಡಿದರೂ ನಾವು ಯೋಜನೆ ಕಾಮಗಾರಿ ಆರಂಭಿಸುತ್ತೇವೆ. ಅವರು (ಸಾವಂತ್) ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ಮಾತನಾಡಿದ್ದಾರೆ’ ಎಂದರು.

‘ನಮ್ಮದು ಒಕ್ಕೂಟ ವ್ಯವಸ್ಥೆಯ ರಾಷ್ಟ್ರ. ಇಲ್ಲಿ ಅಂತರರಾಜ್ಯಗಳ ನಡುವಣ ಸಂಬಂಧ ಹೇಗಿರಬೇಕು ಎಂಬುದು ಅವರಿಗೆ ತಿಳಿದಿಲ್ಲ. ಇದು ನಮ್ಮ ನೆಲ, ನಮ್ಮ ಯೋಜನೆ. ನಾವು ಮಾಡುತ್ತೇವೆ. ಇದನ್ನು ಪ್ರಶ್ನಿಸುವುದು ಅವರ ಹಕ್ಕಲ್ಲ. ಮಹದಾಯಿ ವಿಚಾರದಲ್ಲಿ ನ್ಯಾಯಮಂಡಳಿಯ ತೀರ್ಪು ಹೊರಬಿದ್ದಿದೆ. ಯೋಜನೆ ಜಾರಿಗೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಲಾಗಿದೆ’ ಎಂದರು.

ADVERTISEMENT

‘ಮಹದಾಯಿ ಯೋಜನೆ ಜಾರಿಯಾಗಲಿದೆ ಎಂದು ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ಕೇಂದ್ರದ ಹಾಲಿ ಸಚಿವ ಪ್ರಲ್ಹಾದ ಜೋಶಿ ಸಂಭ್ರಮಾಚರಣೆ ಮಾಡಿದ್ದರು’ ಎಂದೂ ಹೇಳಿದರು.

‘ಸರ್ವಪಕ್ಷ ಸಭೆ ಕರೆಯುತ್ತೀರಾ’ ಎಂಬ ಪ್ರಶ್ನೆಗೆ, ‘ಎಲ್ಲ ಪಕ್ಷಗಳ ಸಂಸದರ ಸಭೆ ಕರೆಯುವುದಾಗಿ ಈಗಾಗಲೇ ಹೇಳಿದ್ದೇನೆ’ ಎಂದೂ ಹೇಳಿದರು.

‘ಕೇಂದ್ರ ಸಚಿವರು ರಾಜಕೀಯ ಮಾಡುವುದಿಲ್ಲ’:

‘ಮಹದಾಯಿ ಯೋಜನೆಯ ವಿಚಾರದಲ್ಲಿ ಕೇಂದ್ರ ಜಲಶಕ್ತಿ ಮತ್ತು ಅರಣ್ಯ ಸಚಿವರು ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿ ಕೆಲಸಕ್ಕೆ ಬೆಂಬಲವಾಗಿದ್ದಾರೆ’ ಎಂದು ಶಿವಕುಮಾರ್ ತಿಳಿಸಿದರು.

‘ಮಹದಾಯಿ ಯೋಜನೆ ವಿಚಾರದಲ್ಲಿ ಕೇಂದ್ರದ ಸಚಿವರು ದಾರಿ ತಪ್ಪಿಸುತ್ತಿದ್ದಾರಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಈ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವರನ್ನು ನಾನು ಐದಾರು ಬಾರಿ ಭೇಟಿ ಮಾಡಿದ್ದೇನೆ. ಅವರು ನಿಷ್ಪಕ್ಷಪಾತವಾಗಿದ್ದಾರೆ. ಅರಣ್ಯ ಸಚಿವರು ಕೂಡಾ ರಾಜಕೀಯ ಮಾಡುವುದಿಲ್ಲ. ಸಮಸ್ಯೆ ಇರುವುದು ಗೋವಾದಲ್ಲಿ’ ಎಂದರು.

ಮಹದಾಯಿ ವಿಚಾರದಲ್ಲಿ ಕೇಂದ್ರಕ್ಕೆ ಎಲ್ಲ ಸಂಸದರ ನಿಯೋಗ ಕರೆದೊಯ್ಯಲು ನಾನು ಪ್ರಯತ್ನಿಸುತ್ತೇನೆ. ನಮ್ಮ ಜೊತೆ ಯಾರು ಬರುತ್ತಾರೊ ಬಿಡುತ್ತಾರೊ ನಮ್ಮ ಕೆಲಸ ಮಾಡುತ್ತೇವೆ
ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ

‘ಗೋವಾದ ಒಬ್ಬ ಸಂಸದರಿಗಾಗಿ ರಾಜ್ಯ ಮಾರಿಕೊಳ್ಳಲಾಗದು’ ‘ಗೋವಾದ ಕೇವಲ ಒಬ್ಬ ಸಂಸದರಿಗಾಗಿ ಕರ್ನಾಟಕವನ್ನು ಮಾರಿಕೊಳ್ಳಲು ಸಾಧ್ಯವಿಲ್ಲ. ಈ ವಿಚಾರವಾಗಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರದ ಸಚಿವರು ಮತ್ತು ಪ್ರಧಾನಿ ಮೇಲೆ ಬಿಜೆಪಿ ಸಂಸದರು ಒತ್ತಡ ಹಾಕಬೇಕು’ ಎಂದು ಶಿವಕುಮಾರ್ ಹೇಳಿದರು. ‘ಮಹದಾಯಿ ಯೋಜನೆ ನಮ್ಮ ರಾಜ್ಯದ ಸ್ವಾಭಿಮಾನದ ಪ್ರಶ್ನೆ. ಈ ವಿಚಾರದಲ್ಲಿ ರಾಜ್ಯದ ಸಂಸದರು ಬಾಯಿ ಮುಚ್ಚಿಕೊಂಡಿರುವುದೇ ದೊಡ್ಡ ತಪ್ಪು. ನಮ್ಮ ರಾಜ್ಯದ 28 ಲೋಕಸಭಾ ಸದಸ್ಯರು 12 ರಾಜ್ಯಸಭಾ ಸದಸ್ಯರು ಒಗ್ಗಟ್ಟಿನಿಂದ ಹೋರಾಡಿ ರಾಜ್ಯದ ಗೌರವ ಕಾಪಾಡಬೇಕು’ ಎಂದು ಮನವಿ ಮಾಡಿದರು. ‘ನಾನು ಕೂಡ ಕೇಂದ್ರ ಜಲಶಕ್ತಿ ಸಚಿವರು ಮತ್ತು ಪ್ರಧಾನಿಯವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.