ಹೈಕೋರ್ಟ್
ಬೆಂಗಳೂರು: ‘ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಅಕ್ರಮ ಚಟುವಟಿಕೆ ಆರೋಪದ ಪ್ರಕರಣದಲ್ಲಿ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರ ಆರ್ಥಿಕ ವ್ಯವಹಾರಗಳ ಪ್ರಮುಖ ಪಾಲುದಾರ ಎಚ್.ಅನಿಲ್ ಗೌಡ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು’ ಎಂದು ಹೈಕೋರ್ಟ್, ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ತಾಕೀತು ಮಾಡಿದೆ.
‘ಇ.ಡಿ ಅಧಿಕಾರಿಗಳು ನನಗೆ ಜಾರಿಗೊಳಿಸಿರುವ ಸಮನ್ಸ್ ರದ್ದುಪಡಿಸಬೇಕು’ ಎಂದು ಕೋರಿ ವಕೀಲರೂ ಆದ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಅವರ ಪುತ್ರ ಎಚ್.ಅನಿಲ್ ಗೌಡ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಇ.ಡಿ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ ಕಾಮತ್, ‘ಅರ್ಜಿದಾರರು ವಕೀಲರಾಗಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಇ.ಡಿ ಸಮನ್ಸ್ ಜಾರಿಗೊಳಿಸಿಲ್ಲ. ಬದಲಿಗೆ ವೀರೇಂದ್ರ ಅವರ ಕಂಪನಿ ಸೇರಿದಂತೆ ಹಲವು ವಾಣಿಜ್ಯ ಕಂಪನಿಗಳಲ್ಲಿ ಅನಿಲ್ ಗೌಡ ಪ್ರಮುಖ ಪಾಲುದಾರಾಗಿದ್ದಾರೆ. ಅವರ ವಿರುದ್ಧ ಅಕ್ರಮವಾಗಿ ಹಣ ಹೂಡಿಕೆ ಮಾಡಿದ ಗಂಭೀರ ಆರೋಪವಿದೆ’ ಎಂದರು.
‘ಯಾವುದೇ ವ್ಯಕ್ತಿಯ ವಿರುದ್ಧ ಈ ರೀತಿಯ ಆರೋಪ ಬಂದಾಗ ಸಮನ್ಸ್ ಜಾರಿಗೊಳಿಸುವುದು ಕಾನೂನು ಬದ್ಧ ಪ್ರಕ್ರಿಯೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವುದು ಸುತಾರಾಂ ಒಪ್ಪತಕ್ಕ ವಿಷಯವಲ್ಲ. ಈ ಪ್ರಕರಣದಲ್ಲಿ ಅರ್ಜಿದಾರರು ತನಿಖಾಧಿಕಾರಿಗಳ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ’ ಎಂದು ಬಲವಾಗಿ ಆಕ್ಷೇಪಿಸಿ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಯಾಗಿ ಅರ್ಜಿದಾರ ಪರ ಹಾಜರಾಗಿದ್ದ ಸುಪ್ರೀಂ ಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ವಿಕಾಸ್ ಪಹ್ವಾ, ‘ಇ.ಡಿ ಪರ ವಕೀಲರ ವಾದದಲ್ಲಿ ಯಾವುದೇ ಹುರುಳಿಲ್ಲ. ನ್ಯಾಯಪೀಠ ಅವರ ವಾದವನ್ನು ಒಪ್ಪಿಕೊಂಡರೆ ಅರ್ಜಿದಾರರ ಬದುಕುವ ಹಕ್ಕು ಮತ್ತು ಸಂವಿಧಾನದ 21ನೇ ವಿಧಿಯಡಿ ಎಲ್ಲರಿಗೂ ಒದಗಿಸಲಾಗಿರುವ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ನಮ್ಮ ಕಕ್ಷಿದಾರರಿಗೂ ಕಂಪನಿಗೂ ಯಾವುದೇ ಸಂಬಂಧವಿಲ್ಲ ಒಬ್ಬ ವಕೀಲನಾಗಿ ಅವರು ಶಾಸಕ ವೀರೇಂದ್ರ ಅವರಿಗೆ ಸಲಹೆ ನೀಡಿದ್ದಾರಷ್ಟೇ. ಈ ಹೇಳಿಕೆಗೆ ಅರ್ಜಿದಾರರು ಬದ್ಧರಾಗಿದ್ದಾರೆ’ ಎಂದು ಪ್ರತಿಪಾದಿಸಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.