ADVERTISEMENT

ಹೃನ್ಮನ ತಣಿಸಿದ ಬಾಹುಬಲಿಯ ಬಣ್ಣಗಳ ಮಜ್ಜನ

ಭಗವಾನ್ ಬಾಹುಬಲಿಗೆ ಮಂಗಲ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 20:21 IST
Last Updated 18 ಫೆಬ್ರುವರಿ 2019, 20:21 IST
   

ಉಜಿರೆ: ಧರ್ಮಸ್ಥಳ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರಿಂದ ಮೂರನೇ ದಿನವಾದ ಸೋಮವಾರ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು.

ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕ ನಡೆಯಿತು.

ಜಲಾಭಿಷೇಕದ ಬಳಿಕ ಬೆಳ್ತಂಗಡಿಯ ಶ್ರೀನಿವಾಸ ಶೆಟ್ಟಿ ಮತ್ತು ಕುಟುಂಬಸ್ಥರು ಇಕ್ಷುರಸದ ಅಭಿಷೇಕ ನಡೆಸಿ ಪುಣ್ಯಭಾಗಿಗಳಾದರು. ವೇಣೂರಿನ ಸುನಂದಾದೇವಿ ಇಂದ್ರ ಕ್ಷೀರಾಭಿಷೇಕ ನಡೆಸಿದರು. ಕಳಸದ ಧರಣೇಂದ್ರಯ್ಯ ಕಲ್ಕೋಡು ಕಲ್ಕಚೂರ್ಣ ಅಭಿಷೇಕ ನೆರವೇರಿಸಿದರು. ಬೆಂಗಳೂರಿನ ಶ್ರೇಷ್ಠ ಜೈನ್ ಕಷಾಯ ಅಭಿಷೇಕ ಮಾಡಿದರೆ, ಬೆಂಗಳೂರಿನ ಎಂ.ಎಸ್. ಮೃತ್ಯುಂಜಯ ಕೇಸರಿ ಅಭಿಷೇಕ ನೆರವೇರಿಸಿದರು. ಮೂಡುಬಿದಿರೆಯ ರೋಹಿಣಿ ಆದಿರಾಜ್ ಕಷಾಯ ಅಭಿಷೇಕ ಮಾಡಿದರು. ಮಂಗಳೂರಿನ ರತ್ನಾಕರ ಜೈನ್, ಮನ್ಮಥ ಕುಮಾರ್ ನೆಲ್ಲಿಕಾರು, ಬೆಂಗಳೂರಿನ ಸೋಹನ್ ಲಾಲ್ ಜೈನ್ ಮತ್ತು ಹುಬ್ಬಳ್ಳಿಯ ಪಂಕಜ ಜೈನ್ ಚತುಷ್ಕೋನ ಅಭಿಷೇಕ ಮಾಡಿ ಪುಣ್ಯಭಾಗಿಗಳಾದರು. ಬೆಳ್ತಂಗಡಿಯ ಶಶಿಕಿರಣ ಜೈನ್ ಶ್ರೀಗಂಧದ ಅಭಿಷೇಕ ಮಾಡಿದರೆ, ಮೂಡುಬಿದಿರೆಯ ಸರೋಜ ಗುಣಪಾಲ ಜೈನ್ ಚಂದನದ ಅಭಿಷೇಕ ನೆರವೇರಿಸಿದರು.

ADVERTISEMENT

ಪುಷ್ಪದಂತ ಸಾಗರ ಮುನಿಮಹಾರಾಜರು ಮಂಗಲ ಪ್ರವಚನ ನೀಡಿದರು.

ಮುನಿ ಸಂಘದವರು ಪಾವನ ಸಾನ್ನಿಧ್ಯ ವಹಿಸಿದ್ದರು. ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದಿರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.

**

* ಸೋಮವಾರ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ

* ಹಾಲು ಒಕ್ಕೂಟದಿಂದ ಭಕ್ತರಿಗೆ ಉಚಿತ ಮಜ್ಜಿಗೆ ವಿತರಣೆ

* ತೋರಣ ವಿಸರ್ಜನೆಯೊಂದಿಗೆ ಮಹಾಮಸ್ತಕಾಭಿಷೇಕ ಸಮಾಪನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.