ADVERTISEMENT

ಶುದ್ಧ ನೀರಿನ ಘಟಕಗಳಿದ್ದರೂ ದುರಸ್ತಿಯದ್ದೆ ಸಮಸ್ಯೆ!

ಅದಲು–ಬದಲು ನೀರಿನಿಂದ ಗ್ರಾಮೀಣ ಜನರ ಆರೋಗ್ಯದ ಮೇಲೆ ಪರಿಣಾಮ

ನಾಗರಾಜ ಚಿನಗುಂಡಿ
Published 14 ಜೂನ್ 2019, 19:30 IST
Last Updated 14 ಜೂನ್ 2019, 19:30 IST
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರ ಗ್ರಾಮದಲ್ಲಿ ಎರಡು ವರ್ಷಗಳಿಂದ ಸ್ಥಗಿತಗೊಂಡ ಶುದ್ಧ ನೀರಿನ ಘಟಕದ ದೃಶ್ಯ
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರ ಗ್ರಾಮದಲ್ಲಿ ಎರಡು ವರ್ಷಗಳಿಂದ ಸ್ಥಗಿತಗೊಂಡ ಶುದ್ಧ ನೀರಿನ ಘಟಕದ ದೃಶ್ಯ   

ರಾಯಚೂರು: ಜಿಲ್ಲೆಯ ವಿವಿಧೆಡೆ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದ್ದರೂ, ಅವುಗಳ ದುರಸ್ತಿ ಕೈಗೊಳ್ಳುವುದಕ್ಕೆ ಸ್ಪಷ್ಟ ಮಾರ್ಗದರ್ಶಿ ನಿಯಮಗಳನ್ನು ನೀಡಿಲ್ಲ. ಇದರಿಂದಾಗಿ ನೀರಿನ ಘಟಕಗಳು ವ್ಯವಸ್ಥೆಯ ಆಗರಗಳಾಗಿವೆ!

ರಾಯಚೂರು ತಾಲ್ಲೂಕಿನ ಕಮಲಾಪುರ, ಸಿಂಧನೂರು ತಾಲ್ಲೂಕಿನ ಹೊಸಳ್ಳಿ ಕ್ಯಾಂಪ್‌, ದೇವದುರ್ಗ ತಾಲ್ಲೂಕಿನ ಚಿಕ್ಕಿ ಬುದೂರು ಹಾಗೂ ಹಟ್ಟಿ ಪಟ್ಟಣದ ಸಂತೆ ಬಜಾರ್‌ದ ಘಟಕಗಳು ಸೇರಿ ಅಧಿಕೃತವಾಗಿ ಒಟ್ಟು 76 ಶುದ್ಧ ನೀರಿನ ಘಟಕಗಳು ಕಾರ್ಯಸ್ಥಗಿತಗೊಳಿಸಿವೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ ತ್ವರಿತವಾಗಿ ದುರಸ್ತಿಗೊಳಿಸುವ ಕಾರ್ಯ ಆಗುತ್ತಿಲ್ಲ.

‘ಸ್ಥಗಿತವಾದ ಶುದ್ಧ ನೀರಿನ ಘಟಕಗಳಿಗೆ ಅಗತ್ಯ ಬಿಡಿಭಾಗಗಳನ್ನು ಖರೀದಿಸಿ ಅಳವಡಿಸಲು ಅನುಮತಿ ನೀಡುವಂತೆ ಕೋರಿ ಗ್ರಾಮೀಣ ನೀರು ಸರಬರಾಜು ವಿಭಾಗದ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಪ್ರತಿಕ್ರಿಯೆ ಬಂದ ನಂತರ ಬಿಡಿಭಾಗ ಖರೀದಿಸಲಾಗುವುದು. ಅನುದಾನದ ಸಮಸ್ಯೆಯಿಲ್ಲ; ಆದರೆ ಅನುಮತಿ ಪಡೆದು ವೆಚ್ಚ ಮಾಡಬೇಕಾಗುತ್ತದೆ. ಖಾಸಗಿ ಏಜೆನ್ಸಿಗಳಿಗೆ ಬಿಡುಗಡೆ ಮಾಡಬೇಕಿದ್ದ ಅನುದಾನವು ಜಿಲ್ಲೆಯಲ್ಲಿ ಉಳಿದಿದೆ. ಅದನ್ನು ದುರಸ್ತಿ ಕಾರ್ಯಕ್ಕೆ ವೆಚ್ಚ ಮಾಡಲು ಅನುಮೋದನೆ ಕೇಳಲಾಗಿದೆ’ ಎಂದು ಜಿಲ್ಲಾ ಗ್ರಾಮೀಣ ನೀರು ಸರಬರಾಜು ವಿಭಾಗದ ಎಂಜಿನಿಯರುಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ಖಾಸಗಿ ಏಜೆನ್ಸಿಗಳು ಶುದ್ಧ ನೀರಿನ ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಈ ಕಾರಣಕ್ಕಾಗಿ ಎರಡು ಕಂಪೆನಿಗಳನ್ನು ಕೈಬಿಡಲಾಗಿದೆ. 45 ಶುದ್ಧ ನೀರಿನ ಘಟಕಗಳ ನಿರ್ವಹಣೆಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿತ್ತು. ಅವು ಕೂಡಾ ಸಮಸ್ಯೆಗಳ ಸುಳಿಗೆ ಸಿಲುಕಿವೆ. ಸರ್ಕಾರೇತರ ಸಂಸ್ಥೆಗಳು ವಹಿಸಿಕೊಂಡ ಘಟಕಗಳು ಮಾತ್ರ ಸಮರ್ಕವಾಗಿವೆ’ ಎಂದು ತಿಳಿಸಿದರು.

‘ಶುದ್ಧ ನೀರಿನ ಘಟಕವಿದ್ದರೂ ಅಲ್ಲಿನ ನೀರು ಕುಡಿಯುವ ರೂಢಿಯನ್ನು ಬಹಳ ಜನರು ಬಿಡುತ್ತಿದ್ದಾರೆ. ಘಟಕವು ದುರಸ್ತೀಡಾದರೆ ಮತ್ತೆ ಯಾವಾಗ ಆರಂಭವಾಗುತ್ತದೆ ಎಂದು ನಿಶ್ಚಿತವಾಗಿಲ್ಲ. ಶುದ್ಧ ನೀರು ಸಿಗದೆ ಇರುವುದಕ್ಕೆ ನಳ ಅಥವಾ ಕೊಳವೆಬಾವಿ ನೀರನ್ನೆ ಜನರು ಅನಿವಾರ್ಯವಾಗಿ ಸೇವಿಸಬೇಕು. ನೀರು ಅದಲು ಬದಲು ಮಾಡಿಕೊಂಡು ಬಹಳಷ್ಟು ಜನರು ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ’ ಎಂದು ಸಿರವಾರ ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದ ದೇವೇಗೌಡ ಅವರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.