ADVERTISEMENT

ಮಣಿಪುರ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಸುಲಭ ಪ್ರವೇಶ ನೀಡಬೇಕು: ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 15:41 IST
Last Updated 26 ಜುಲೈ 2023, 15:41 IST
   

ಬೆಂಗಳೂರು: ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರದಿಂದ ರಾಜ್ಯಕ್ಕೆ ವಲಸೆ ಬರುವ ಮಕ್ಕಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಒತ್ತಾಯಿಸದೇ ರಾಜ್ಯದ ಶಾಲಾ, ಕಾಲೇಜುಗಳಲ್ಲಿ ಪ್ರವೇಶ ನೀಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ.

ಗಲಭೆ ಮತ್ತಿತರ ಕಾರಣಗಳಿಂದ ಕರ್ನಾಟಕಕ್ಕೆ ವಲಸೆ ಬರುವ ಇತರೆ ರಾಜ್ಯಗಳ ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಡಲು 2019ರ ಆಗಸ್ಟ್‌ನಲ್ಲಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಅನುಗುಣವಾಗಿ ರಾಜ್ಯದ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಪ್ರವೇಶ ನೀಡಬೇಕು. ಜನನ ಪ್ರಮಾಣಪತ್ರ, ವಲಸೆ ಪ್ರಮಾಣಪತ್ರ, ವರ್ಗಾವಣೆ ಪತ್ರ ಸೇರಿದಂತೆ ಯಾವ ದಾಖಲೆಗಳು ಇಲ್ಲದಿದ್ದರೂ, ಆ ಮಕ್ಕಳು ಪ್ರಸ್ತುತ ಕಲಿಯುತ್ತಿದ್ದ ತರಗತಿಗಳಿಗೆ ದಾಖಲು ಮಾಡಿಕೊಳ್ಳಬೇಕು. ಪಾಲಕರಿಂದ ಸ್ವಯಂ ದೃಢೀಕರಣಪತ್ರ ಪಡೆಯಬಹುದು. ಪಿಯು ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರದ ಬದಲು ನಿರ್ದಿಷ್ಟ ಅವಧಿಯ ಒಳಗೆ ದಾಖಲೆಗಳನ್ನು ಒದಗಿಸುವ ಕರಾರಿಗೆ ಒಳಪಡಿಸಿ ಪ್ರವೇಶ ನೀಡಬೇಕು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT