ADVERTISEMENT

‘ನನ್ನನ್ನು ಮುಖ್ಯಮಂತ್ರಿ ಮಾಡಲು ನಿರ್ದೇಶಿಸಿ’ ಎಂದು ಕೋರಿದ್ದ ಪಿಐಎಲ್ ವಜಾ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 8:51 IST
Last Updated 6 ಜುಲೈ 2018, 8:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ‌.ದೇವೇಗೌಡರಿಗೆ ಮೊದಲು ಇದ್ದ ಜಮೀನು 3 ಎಕರೆ 7 ಗುಂಟೆ. ಆದರೆ, ಅವರ ಬಳಿ ಇವತ್ತು 3,700 ಎಕರೆ ಜಮೀನಿದೆ. ಸ್ವಾಮಿ, ನನ್ನನ್ನು ರಾಜ್ಯಪಾಲರು ಮುಖ್ಯಮಂತ್ರಿ ಆಗಲಿ ಎಂದು ಆಹ್ವಾನಿಸಿದರೆ, ದೇವೇಗೌಡರ ಅಷ್ಟೂ ಜಮೀನನ್ನು ಹಾಸನದ ರೈತರಿಗೆ ಹಂಚುತ್ತೇನೆ....!

ಹೀಗೆಂದು ತೀರ್ಥಹಳ್ಳಿಯ ರೈತ ಹಾಗೂ ಕಾಂಗ್ರೆಸ್ ಕಾರ್ಯಕರ್ತರೂ ಆದ ಟಿ‌.ಡಿ‌.ಆರ್.ಹರಿಶ್ಚಂದ್ರ ಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಮೊಹಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಖುದ್ದು ವಾದ ಮಂಡಿಸಿದ ಅರ್ಜಿದಾರರೂ ಆದ ಹರಿಶ್ಚಂದ್ರ ಗೌಡ, 'ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವಿಸ್ಬ್ಯಾಂಕ್‌ನಲ್ಲಿ ಸಾವಿರಾರು ಕೋಟಿ ಹಣವನ್ನು ಇರಿಸಿದ್ದಾರೆ. ಒಂದು ವೇಳೆ ನಾನು ಮುಖ್ಯಮಂತ್ರಿ ಆದರೆ ಆ ಹಣವನ್ನು ತಂದು ರಾಜ್ಯದ ರೈತರ ಸಾಲ ತೀರಿಸುತ್ತೇನೆ' ಎಂದರು.

ADVERTISEMENT

'ನಾನು ಮುಖ್ಯಮಂತ್ರಿ ಆಗಲು ಕೋರಿದ ಮನವಿಯನ್ನು ರಾಜ್ಯಪಾಲರು ಪರಿಗಣಿಸಿಲ್ಲ‌, ದಯಮಾಡಿ ರಾಜ್ಯಪಾಲರಿಗೆ ಈ ಕುರಿತು ನಿರ್ದೇಶನ ನೀಡಿ' ಎಂದು ಕೋರಿದರು.

'ನಾನು 42 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಿದ್ದೇನೆ. ಸರ್ಕಾರ ರಚನೆಗೆ ಅವಕಾಶ ಕೋರಿ ನಾನು ರಾಜ್ಯಪಾಲರಿಗೆ ಪತ್ರ ಬರೆದಿದ್ದೆ ಆದರೆ ಅದನ್ನು ರಾಜ್ಯಪಾಲರು ಪರಿಗಣಿಸಿಲ್ಲ. ಆದ್ದರಿಂದ ರಾಜ್ಯಪಾಲರಿಗೆ ‌ ನಿರ್ದೇಶನ ನೀಡಿದರೆ ಶಾಸಕರು ನನ್ನ ಮನೆ ಬಳಿ ಬಂದು ನನಗೆ ಬೆಂಬಲ ನೀಡುತ್ತಾರೆ. ಬೇಕಿದ್ದರೆ ನೀವು ನೋಟಿಸ್ ಜಾರಿಗೆ ಆದೇಶಿಸಿ ನೋಡಿ' ಎಂದು ಹರಿಶ್ಚಂದ್ರ ಗೌಡ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಸುಮಾರು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ವಾದ ಮಂಡಿಸಿದ ಹರಿಶ್ಚಂದ್ರ ಗೌಡ, 'ಬಾಬರಿ ಮಸೀದಿ ಕೆಡವಿದ್ದು ಆರ್.ಎಸ್.ಎಸ್ ಕಾರ್ಯಕರ್ತರಲ್ಲ‌. ಅಂದಿನ ಪ್ರಧಾನಿ ಪಿ.ವಿ‌.ನರಸಿಂಹ ರಾವ್' ಎಂದರು.

ಇದಕ್ಕೆ ನ್ಯಾಯಪೀಠ 'ಈ ಪಿಐಎಲ್ ವಿಚಾರಣೆಗೆ ಯಾವುದೇ ಆಧಾರವಿಲ್ಲ' ಎಂಬ ಅಭಿಪ್ರಾಯ ವ್ಯಕ್ಯಪಡಿಸಿ ವಜಾ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.