
ಬೆಂಗಳೂರು: ‘ಕೇರಳದಲ್ಲಿ ಕನ್ನಡಿಗರ ಮೇಲೆ ಮಲಯಾಳ ಭಾಷೆಯನ್ನು ಹೇರಿಕೆ ಮಾಡುತ್ತಿರುವ ವಿಷಯದಲ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಕಿವಿಹಿಂಡುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ವಿಚಾರವಾಗಿ ಸಿದ್ದರಾಮಯ್ಯ ಅವರು ಕೇರಳ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಆದರೆ ಅಷ್ಟು ಸಾಲದು’ ಎಂದರು.
‘ಕೋಗಿಲು ವಿಚಾರದಲ್ಲಿ ಕೆ.ಸಿ.ವೇಣುಗೋಪಾಲ್ ಅವರು ಮಾತನಾಡಿದ್ದರು. ಅವರು ಈಗ ಕನ್ನಡಿಗರ ವಿಚಾರದಲ್ಲೂ ಮಧ್ಯ ಪ್ರವೇಶಿಸಲಿ. ಕೇರಳ ಕನ್ನಡಿಗರು, ಕನ್ನಡ ಶಾಲೆಗಳ ರಕ್ಷಣೆಗಾಗಿ ನಿಲ್ಲಬೇಕು. ಅವರಿಂದ ಅಂತಹ ಕೆಲಸ ಮಾಡಿಸುವ ಹೊಣೆ ರಾಜ್ಯ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಅವರದ್ದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಮಲಯಾಳ ಹೇರಿಕೆಗೆ ಕೇರಳ ಸರ್ಕಾರ ಮಸೂದೆ ರಚಿಸುವ ವಿಚಾರ ಗೊತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಮ್ಮನಿದ್ದರು. ಇದೊಂದು ರೀತಿ ಮ್ಯಾಚ್ ಫಿಕ್ಸಿಂಗ್’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಕೇರಳ ಮುಖ್ಯಮಂತ್ರಿ ಜತೆಗೆ ಈ ಇಬ್ಬರೂ ವೇದಿಕೆ ಹಂಚಿಕೊಂಡಿದ್ದರು. ಕನ್ನಡಿಗರ ಬಗ್ಗೆ ಕಾಳಜಿ ಇದ್ದಿದ್ದರೆ ಮಲಯಾಳ ಹೇರಿಕೆ ಬಗ್ಗೆ ಆ ವೇದಿಕೆಯಲ್ಲೇ ಪ್ರಶ್ನಿಸಬೇಕು. ಈಗ ಸಿದ್ದರಾಮಯ್ಯ ಅವರು ಪತ್ರ ಬರೆದಿರುವುದು ಹೊಂದಾಣಿಕೆ ರಾಜಕಾರಣ. ನೀನು ಹೊಡೆದಂತೆ ಮಾಡು ನಾನು ಅತ್ತಂತೆ ಮಾಡುತ್ತೇನೆ ಎಂಬಂತಿದೆ ಈ ಪತ್ರ ವ್ಯವಹಾರ’ ಎಂದರು.
ಬೆಂಗಳೂರು: ‘ಮಲಯಾಳ ಭಾಷಾ ಮಸೂದೆಯನ್ನು ತರಾತುರಿಯಲ್ಲಿ ಜಾರಿಗೆ ತಂದು ಕರ್ನಾಟಕ ಮತ್ತು ಕೇರಳ ನಡುವಿನ ಭಾಷಾ ಬಾಂಧವ್ಯ ಹದಗೆಡುವಂತೆ ಮಾಡುವ ಕೇರಳ ಸರ್ಕಾರದ ಪ್ರಯತ್ನವನ್ನು ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ. ಸೋಮಶೇಖರ ಹೇಳಿದ್ದಾರೆ.
‘ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಪ್ರಥಮ ಭಾಷೆಯಾಗಿ ಮಲಯಾಳ ಕಲಿಸಬೇಕೆಂಬ ಅಂಶವಿರುವ ಈ ಮಸೂದೆಯು ಕಾಸರಗೋಡಿನ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಹುನ್ನಾರ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಮೊದಲ ಭಾಷೆಯಾಗಿ ಮಲಯಾಳ ಕಲಿಕೆ ಕಡ್ಡಾಯಗೊಳಿಸುವುದು ಸರಿಯಲ್ಲ’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.