ADVERTISEMENT

ಮಲ್ಲಾಪುರ ಕೆರೆ: ವಲಸೆ ನಿಲ್ಲಿಸಿದ ಬಾನಾಡಿಗಳು

ಜಿ.ಬಿ.ನಾಗರಾಜ್
Published 1 ಜನವರಿ 2020, 20:00 IST
Last Updated 1 ಜನವರಿ 2020, 20:00 IST
ಚಿತ್ರದುರ್ಗದ ಮಲ್ಲಾಪುರ ಕೆರೆಯಲ್ಲಿರುವ ಪಕ್ಷಿಗಳು
ಚಿತ್ರದುರ್ಗದ ಮಲ್ಲಾಪುರ ಕೆರೆಯಲ್ಲಿರುವ ಪಕ್ಷಿಗಳು   

ಚಿತ್ರದುರ್ಗ: ಚಳಿಗಾಲ ಶುರುವಾಗುತ್ತಿದ್ದಂತೆ ದೂರದೂರಿನಿಂದ ಹಾರಿಬಂದು ಮಲ್ಲಾಪುರ ಕೆರೆಯ ಬಳಿ ಸಂತಾನೋತ್ಪತ್ತಿಯಲ್ಲಿ ತೊಡಗುತ್ತಿದ್ದ ವಿದೇಶಿ ಹಕ್ಕಿಗಳು ವಲಸೆ ನಿಲ್ಲಿಸಿವೆ. ಕೆರೆಯ ಅಸಹನೀಯ ಮಾಲಿನ್ಯ ಪಕ್ಷಿ ಸಂಕುಲದ ಜೀವನ ಕ್ರಮವನ್ನು ಬದಲಿಸಿದೆ.

ಪ್ರತಿ ನವೆಂಬರ್‌ ವೇಳೆಗೆ ಕೆರೆ–ಕುಂಟೆಗಳಿಗೆ ಲಗ್ಗೆ ಇಡುತ್ತಿದ್ದ ಬಾನಾಡಿಗಳು ಕೆಲ ವರ್ಷಗಳಿಂದ ಕಾಣುತ್ತಿಲ್ಲ. ಉತ್ತಮ ಮಳೆ ಸುರಿದು ಜಲ
ಮೂಲಗಳು ಭರ್ತಿಯಾದರೂ ಪಕ್ಷಿಗಳು ಗೋಚರಿಸುತ್ತಿಲ್ಲ. ಚಂದ್ರವಳ್ಳಿ, ತಿಮ್ಮಣ್ಣನಾಯಕ ಕೆರೆ ಹಾಗೂ ಮುರುಘಾ ಮಠದ ಕೆರೆಗಳಲ್ಲಿ ಬೆರಳೆಣಿಕೆಯ ಹಕ್ಕಿಗಳು ವಿಹರಿಸುತ್ತಿವೆ.

ಚಿತ್ರದುರ್ಗದಿಂದ ಅನತಿ ದೂರದಲ್ಲಿರುವ ಮಲ್ಲಾಪುರ ಕೆರೆ ಪಕ್ಷಿ ಸಂಕುಲದ ನೆಚ್ಚಿನ ತಾಣ. ಸುತ್ತ ತೋಟ, ಜಮೀನು, ಕುರುಚಲು ಗಿಡಗಳಿಂದ ಕಂಗೊಳಿಸುತ್ತಿದ್ದ ಕೆರೆಯಲ್ಲಿ ವಿದೇಶಿ ಬಾನಾಡಿಗಳು ಅದ್ಭುತ ಲೋಕವನ್ನು ಸೃಷ್ಟಿಸುತ್ತಿದ್ದವು. ಸೈಬೀರಿಯಾ ಹಾಗೂ ಆಸ್ಟ್ರೇಲಿಯಾದಿಂದ ಬರುತ್ತಿದ್ದ ಹಕ್ಕಿಗಳು ಈಗ ಕಾಣುತ್ತಿಲ್ಲ. ಕೆರೆಯಲ್ಲಿ ಹೆಚ್ಚಾದ ಮಾಲಿನ್ಯದ ಪ್ರಮಾಣ ಬಾನಾಡಿಗಳ ವಿಹಾರಕ್ಕೆ ಮಾರಕವಾಗಿದೆ ಎಂಬುದು ಪಕ್ಷಿ ವೀಕ್ಷಕರ ಅಭಿಪ್ರಾಯ.

ADVERTISEMENT

ಬಣ್ಣದ ಕೊಕ್ಕರೆ (ಪೇಂಟೆಡ್‌ ಸ್ಟಾರ್ಕ್‌), ರಿವರ್‌ ಟರ್ನ್‌ ಸೇರಿ 224 ಬಗೆಯ ಪಕ್ಷಿಗಳನ್ನು ಪಕ್ಷಿ ವೀಕ್ಷಕ ಎನ್‌.ಡಿ. ರವಿಕುಮಾರ್‌ ಗುರುತಿಸಿದ್ದರು. ಮಲ್ಲಾಪುರ ಕೆರೆಯ ಸುತ್ತ 51 ಬಗೆಯ ಅಪರೂಪದ ಬಾನಾಡಿಗಳು ಪಕ್ಷಿ ವೀಕ್ಷಕ ಮುರುಗೇಶ್‌ ಅವರ ಕಣ್ಣಿಗೆ ಬಿದ್ದಿದ್ದವು. ನೀರು ಕಾಗೆ (ಲಿಟಲ್‌ ಕಾರ್ಮೊರೆಂಟ್‌), ಅಂಬರ ಗುಬ್ಬಿ (ಕಾಮನ್‌ ಸಾಲ್ವೊ), ನೀರು ಗೊರವ (ಬ್ಲಾಕ್‌ ವಿಂಗ್ಡ್‌ ಸ್ಟಿಲ್‌), ಕೊಕ್ಕರೆ ಸೇರಿ ಕೆಲವೇ ಪಕ್ಷಿಗಳು ಈಗಿವೆ. ಮಾಲಿನ್ಯದಿಂದ ಕೂಡಿದ ನೀರಿನಲ್ಲಿ ವಿಹರಿಸಿ ಆರೋಗ್ಯ ಸಮಸ್ಯೆಗೆ ಸಿಲುಕುತ್ತಿವೆ.

217 ಎಕರೆ ವಿಸ್ತೀರ್ಣದ ಮಲ್ಲಾಪುರ ಕೆರೆ ಒತ್ತುವರಿಯಾಗಿದೆ. ಕೆರೆಯ ಎರಡು ಬದಿಯಲ್ಲಿ ಬಡಾವಣೆಗಳು ತಲೆ ಎತ್ತಿವೆ. ಸೊಲ್ಲಾಪುರ– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ ಏರುತ್ತಿದ್ದು, ವಾಹನ ಸಂಚಾರ ಹೆಚ್ಚಾಗಿದೆ. ಗೂಡು ಕಟ್ಟಿಕೊಳ್ಳಲು ನೆರವಾಗುತ್ತಿದ್ದ ಮರ–ಗಿಡಗಳ ಸಂಖ್ಯೆಯೂ ಕಡಿಮೆಯಾಗಿದೆ. ಬಾನಿಡಿಗಳಿಗೆ ಪ್ರತಿಕೂಲ ವಾತಾವರಣ ನಿರ್ಮಾಣವಾಗಿದೆ. ವಾಹನ ಸಂಚಾರ, ಧಾರ್ಮಿಕ ಕೇಂದ್ರಗಳ ಧ್ವನಿವರ್ಧಕದ ಸದ್ದು ಪಕ್ಷಿಗಳ ನೆಮ್ಮದಿ ಹಾಳು ಮಾಡಿವೆ.

ಚಿತ್ರದುರ್ಗದ ಕೊಳಚೆ ನೀರು ಮಲ್ಲಾಪುರ ಕೆರೆಯ ಒಡಲು ಸೇರ ತೊಡಗಿದ ಮೇಲೆ ದುರ್ವಾಸನೆ ಹೆಚ್ಚಾಗಿದೆ. ಸದಾ ಕಾಲ ತುಂಬಿರುವ ಕೆರೆಯ ನೀರು ನೀಲಿ ಬಣ್ಣಕ್ಕೆ ತಿರುಗಿದೆ. ಪ್ಲಾಸ್ಟಿಕ್‌ ಚೀಲ, ಬಾಟಲಿಗಳು ನೀರಿನಲ್ಲಿ ತೇಲುತ್ತವೆ. ಕೆರೆಯಲ್ಲಿದ್ದ ನಡುಗಡ್ಡೆಗಳು ನಾಶವಾಗಿವೆ. ಬಾನಾಡಿಗಳು ಆವಾಸಸ್ಥಾನ ಬದಲಿಸಲು ಇವೆಲ್ಲವೂ ಕಾರಣ ಎಂದು ಪಟ್ಟಿ ಮಾಡುತ್ತಾರೆ ಪಕ್ಷಿ ವೀಕ್ಷಕರು.

‘ಪಕ್ಷಿಗಳು ನೆಲೆ ನಿಲ್ಲಲು ಪೂರಕವಾದ ವಾತಾವರಣ ಮಲ್ಲಾಪುರ ಕೆರೆಯ ಸಮೀಪ ಇಲ್ಲ. ವಿದೇಶಿ ಹಕ್ಕಿಗಳು ಬರುವುದು ಬಹುತೇಕ ಕಡಿಮೆಯಾಗಿದೆ. ಕೆಲವೇ ಹಕ್ಕಿ ಬಂದರೂ ಗೋನೂರು, ಕಾತ್ರಾಳು, ತಿಮ್ಮಣ್ಣನಾಯಕ ಕೆರೆಗೆ ಆವಾಸಸ್ಥಾನ ಬದಲಿಸುತ್ತವೆ. ಸುಮಾರು 200 ಕಿ.ಮೀ ವ್ಯಾಪ್ತಿಯಲ್ಲಿ ಸಿಗುವ ಜಲಮೂಲಗಳನ್ನು ಹುಡುಕಿಕೊಳ್ಳುತ್ತವೆ’ ಎನ್ನುತ್ತಾರೆ ಪಕ್ಷಿ ವೀಕ್ಷಕ ಮುರುಗೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.