ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್‌ಮೇಕರ್ ಅಳವಡಿಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೇರವೇರಿದೆ ಎಂದು ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ (ಅ.1) ತಿಳಿಸಿದ್ದಾರೆ.
83 ವರ್ಷದ ಖರ್ಗೆ ಅವರು ಮಂಗಳವಾರದಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು.
ಖರ್ಗೆ ಅವರ ಆರೋಗ್ಯ ಸ್ಥಿತಿಯ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪ್ರಿಯಾಂಕ್ ಮಾಹಿತಿ ನೀಡಿದ್ದಾರೆ.
'ಖರ್ಗೆ ಅವರಿಗೆ ಪೇಸ್‌ಮೇಕರ್ ಅನ್ನು ಯಶಸ್ವಿಯಾಗಿ ಅಳವಡಿಸಲಾಯಿತು. ಇದೊಂದು ಸಣ್ಣ ಶಸ್ತ್ರಚಿಕಿತ್ಸೆ, ಅವರು ಆರೋಗ್ಯವಾಗಿದ್ದಾರೆ' ಎಂದು ಹೇಳಿದ್ದಾರೆ.
'ಖರ್ಗೆ ಅವರು ಅಕ್ಟೋಬರ್ 3ರಿಂದ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುವ ನಿರೀಕ್ಷೆಯಿದೆ. ಅಲ್ಲದೆ ಎಲ್ಲ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಬೆಂಬಲ, ಕಾಳಜಿಗೆ ಕೃತಜ್ಞತೆಗಳು' ಎಂದು ಪ್ರಿಯಾಂಕ್ ತಿಳಿಸಿದ್ದಾರೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್, 'ವಯೋಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದಾಗಿ ಖರ್ಗೆ ಅವರಿಗೆ ಪೇಸ್‌ಮೇಕರ್ ಅಳವಡಿಸಲು ವೈದ್ಯರು ಸಲಹೆ ನೀಡಿದ್ದರು. ಹೃದಯ ಬಡಿತದ ಸ್ಥಿರತೆಗಾಗಿ ಇದು ಅಗತ್ಯ ಎಂದಿದ್ದರು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆ ಇಲ್ಲ' ಎಂದು ಹೇಳಿದ್ದಾರೆ.
'ವೈದ್ಯರು ವಿಶ್ರಾಂತಿ ಪಡೆಯುವಂತೆ ಖರ್ಗೆ ಅವರಿಗೆ ಸೂಚಿಸಿದ್ದಾರೆ. ಎರಡು ಮೂರು ದಿನಗಳ ವಿಶ್ರಾಂತಿ ಬೇಕಾಗಬಹುದು. ಯಾರೂ ಗಾಬರಿಪಡುವ ಅಗತ್ಯವಿಲ್ಲ. ನಿಮ್ಮೆಲ್ಲರ ಹಾರೈಕೆಗಳಿಂದಾಗಿ ಖರ್ಗೆ ಅವರಿಗೆ ಯಾವುದೇ ಸಮಸ್ಯೆ ಇಲ್ಲ' ಎಂದಿದ್ದಾರೆ.
ಈ ಮೊದಲು ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.