ADVERTISEMENT

ಎಸ್‌ಪಿ– ಬಿಎಸ್‌ಪಿ ಮೈತ್ರಿ ಆ ಪಕ್ಷಗಳಿಗೆ ಬಿಟ್ಟದ್ದು: ಖರ್ಗೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 18:21 IST
Last Updated 12 ಜನವರಿ 2019, 18:21 IST
   

ಬೆಂಗಳೂರು:‘ಉತ್ತರ ಪ್ರದೇಶದಲ್ಲಿ ಎಸ್‌ಪಿ– ಬಿಎಸ್‌ಪಿ ಮೈತ್ರಿ ವಿಚಾರ ಆ ಪಕ್ಷಗಳಿಗೆ ಬಿಟ್ಟದ್ದು. ಆದರೆ, ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿ ಪಕ್ಷಗಳು ಒಂದಾಗಬೇಕು ಎನ್ನುವುದು ನನ್ನ ಉದ್ದೇಶ’ ಎಂದು ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಅವರು, ‘ಒಂದೇ ಸಿದ್ಧಾಂತ ಹೊಂದಿರುವವರೆಲ್ಲ ಒಟ್ಟಾಗಿ ಚುನಾವಣೆಗೆ ಹೋಗಬೇಕೆಂಬುದು ನಮ್ಮ ಉದ್ದೇಶ. ಇನ್ನೂ ಸಮಯವಿದೆ. ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆಇರುವ ಎಲ್ಲರೂ ಒಗ್ಗೂಡಿ ಹೋಗುವ ಬಗ್ಗೆ ಪ್ರಯತ್ನ ಮಾಡುತ್ತೇವೆ’ ಎಂದರು.

‘ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರಾಜಕೀಯ ಶಕ್ತಿಗಳಿವೆ. ಅವುಗಳನ್ನು ನಾವು ಪರಿಗಣಿಸಬೇಕು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಠಿಯಿಂದಲೇ ಸ್ಪರ್ಧಿಸುತ್ತಾರೆ’ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

‘ಸಂಕ್ರಾಂತಿ ಬಳಿಕ ಕ್ರಾಂತಿ ಮಾಡುತ್ತೇವೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. 18 ಶಾಸಕರು ರಾಜೀನಾಮೆ ಕೊಟ್ಟು ಹೋಗುವುದು ಸಾಧ್ಯವಿದೆಯೇ. ಒಂದು ಪಕ್ಷದಲ್ಲೇ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಮೈತ್ರಿ ಸರ್ಕಾರ ಅಂದ ಮೇಲೆ ಸಮಸ್ಯೆಗಳು ಇಲ್ಲದೆ ಇರುತ್ತವೆಯೇ. ಎಲ್ಲವನ್ನೂ ಚರ್ಚಿಸಿ, ಮುಂದುವರಿಯಬೇಕು’ ಎಂದರು.

‘ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ, ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಲು ರಾಷ್ಟ್ರಮಟ್ಟದಲ್ಲಿ ಬೇರೆ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.