ಬೆಂಗಳೂರು: ‘ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ ಪ್ರತ್ಯುತ್ತರವಾಗಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ಕ್ರಮಗಳಿಗೂ ನಾವು ಬೆಂಬಲ ಘೋಷಿಸಿದ್ದೇವೆ. ಅದಕ್ಕೆ ನಾವು ಬದ್ಧರಾಗಿದ್ದು, ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದಾಳಿಯ ವಿಚಾರದಲ್ಲಿ ಧರ್ಮ ಮತ್ತು ಜಾತಿಯನ್ನು ಮುಂದೆ ತರುವುದು ಸರಿಯಲ್ಲ. ಇಲ್ಲಿ ನಾವು ಮುಖ್ಯವೇ ಅಲ್ಲ. ನಾನು ಇಂದು ಇರುತ್ತೇನೆ, ಆಮೇಲೆ ಹೋಗುತ್ತೇನೆ. ಮೋದಿ ಅವರೂ ಇಂದು ಇರುತ್ತಾರೆ, ಆಮೇಲೆ ಹೋಗುತ್ತಾರೆ. ಆದರೆ ದೇಶ ಶಾಶ್ವತವಾಗಿ ಇರುತ್ತದೆ. ಹೀಗಾಗಿ ದೇಶ ಮತ್ತು ದೇಶದ ರಕ್ಷಣೆಯೇ ಮುಖ್ಯ’ ಎಂದರು.
‘ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು, ಹಲವು ವಿಚಾರಗಳನ್ನು ಮುಂದಿಟ್ಟಿದೆ. ದೇಶದ ರಕ್ಷಣೆ ವಿಚಾರದಲ್ಲಿ ಏನು ಅಗತ್ಯವಿತ್ತೋ ಅದನ್ನು ನಾವೂ ಸರ್ಕಾರದ ಮುಂದೆ ಇರಿಸಿದ್ದೇವೆ. ಕೇಂದ್ರವು ನಮ್ಮೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಬೇಕು’ ಎಂದರು.
‘ಅವರಿಗೆ ನಾವು ಬೆಂಬಲ ಘೋಷಿಸಿದ್ದೇವೆ. ದೇಶದ ರಕ್ಷಣೆಗಾಗಿ ಕೇಂದ್ರವು ಹೋರಾಟಕ್ಕೆ ಇಳಿದರೆ, ನಾವು ಅದರ ಜತೆಗೆ ನಿಲ್ಲುತ್ತೇವೆ. ನಮ್ಮ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.