ADVERTISEMENT

ಗಾಂಧಿ ತತ್ವ ಅಡಗಿಸುವ ತಂತ್ರ ಫಲ ನೀಡಿಲ್ಲ: ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರೀಖ್

ಬಿಜೆಪಿಯವರು ಹಿಟ್ಲರ್ ರಕ್ತದವರು: ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 19:53 IST
Last Updated 30 ಜನವರಿ 2021, 19:53 IST
ಗಾಂಧೀಜಿ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಸಲೀಂ ಅಹಮದ್‌, ತಾರೀಖ್ ಅನ್ವರ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ವಿ.ಎಸ್‌. ಉಗ್ರಪ್ಪ ಭಾಗವಹಿಸಿದ್ದರು
ಗಾಂಧೀಜಿ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಸಲೀಂ ಅಹಮದ್‌, ತಾರೀಖ್ ಅನ್ವರ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ವಿ.ಎಸ್‌. ಉಗ್ರಪ್ಪ ಭಾಗವಹಿಸಿದ್ದರು   

ಬೆಂಗಳೂರು: ‘ಶಾಂತಿದೂತ ಮಹಾತ್ಮ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದರು. ಈ ಹತ್ಯೆಯ ಮೂಲಕ ಗಾಂಧಿ ತತ್ವಗಳನ್ನು ಅಡಗಿಸುವ ತಂತ್ರವಿತ್ತು. ಆದರೆ, ಅದು ಫಲ ನೀಡಲಿಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್ ಹೇಳಿದರು.

ಮಹಾತ್ಮ ಗಾಂಧಿಯವರ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿಯವರು ಹಿಟ್ಲರ್ ರಕ್ತದವರು. ಬಿಜೆಪಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಕೂಡ ಇಡುತ್ತಿರಲಿಲ್ಲ. ಗಾಂಧಿ ತತ್ವಕ್ಕೇ ವಿರುದ್ಧವಾಗಿ ನಡೆಯವವರು ಅವರ ಆಶಯದಂತೆ ದೇಶ ಕಟ್ಟುತ್ತಾರಾ? ಕೇವಲ ಮತ ಗಳಿಕೆಗಾಗಿ ಈ ರೀತಿ ಮಾತನಾಡುತ್ತಾರೆ’ ಎಂದು ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಗಾಂಧೀಜಿಯ ಕೊಲೆ ಮಾಡಿದವರನ್ನು ಆರಾಧಿಸುವ ದೇಶದ್ರೋಹಿಗಳು ಹೆಚ್ಚಾಗುತ್ತಿದ್ದಾರೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

‘ಗಾಂಧೀಜಿ ಯಾರನ್ನು ಶತ್ರುಗಳೆಂದು ತಿಳಿದು, ಅವರ ವಿರುದ್ಧ ಹೋರಾಡಿದರೋ, ಅವರು ಗಾಂಧೀಜಿಯವರನ್ನು ಹತ್ಯೆ ಮಾಡಲಿಲ್ಲ. ದೇಶ ಪ್ರೇಮದ ಪಾಠ ಹೇಳುವ ಸಂಘಟನೆಯ ನಾಯಕ ನಾಥೂರಾಮ್ ಗೋಡ್ಸೆ ಎಂಬ ದೇಶದ್ರೋಹಿ ಹತ್ಯೆ ಮಾಡಿದ್ದ ಎಂಬುದನ್ನು ಮರೆಯಬಾರದು’ ಎಂದರು.

‘ಕಾಂಗ್ರೆಸ್ ನಾಯಕರಾಗಿ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದ ಗಾಂಧೀಜಿ ಅಂತರಂಗದಲ್ಲಿ ಒಬ್ಬ ಸಮಾಜ ಸುಧಾರಕರಾಗಿದ್ದರು. ಪ್ರೀತಿ, ಸೋದರತೆ, ಅನುಕಂಪ, ಸತ್ಯ ಮತ್ತು ಅಹಿಂಸೆ ಎಂಬ ಪಂಚಸೂತ್ರಗಳಂತೆ ಬದುಕಿದ ಅವರು ಮಹಾನ್ ಸಮಾಜ ಪರಿವರ್ತಕ’ ಎಂದು ಬಣ್ಣಿಸಿದರು.

‘ಬಿಜೆಪಿಯು ಯುವಜನಾಂಗವನ್ನು ಬಳಸಿಕೊಂಡು ಸಮಾಜದಲ್ಲಿ ಶಾಂತಿ ಕದಡುತ್ತಿದೆ. ಯುವಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದೆ. ಯುವಜನರು ಗಾಂಧಿಯವರ ತತ್ವ ಮತ್ತು ಆದರ್ಶ ರೂಢಿಸಿಕೊಳ್ಳಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಪಕ್ಷದ ಪ್ರಮುಖರಾದ ಟಿ.ಬಿ. ಜಯಚಂದ್ರ, ಎಚ್.ಆಂಜನೇಯ, ರಾಣಿ ಸತೀಶ್ ಹಾಗೂ ವಿ.ಎಸ್. ಉಗ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.