ADVERTISEMENT

ಭತ್ತ ಸಂಶೋಧನೆ:ಫಿಲಿಪ್ಪೀನ್ಸ್‌ ಸಂಸ್ಥೆ ಜತೆ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 14:02 IST
Last Updated 15 ಅಕ್ಟೋಬರ್ 2025, 14:02 IST
ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮತ್ತು ಅಂತರರಾಷ್ಟ್ರೀಯ ಭತ್ತದ ಸಂಶೋಧನಾ ಕೇಂದ್ರದ ಉಪ ಮಹಾ ನಿರ್ದೇಶಕರಾದ ಜುನೆಲ್ ಸಯಾನೋ ಅವರು ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು.
ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮತ್ತು ಅಂತರರಾಷ್ಟ್ರೀಯ ಭತ್ತದ ಸಂಶೋಧನಾ ಕೇಂದ್ರದ ಉಪ ಮಹಾ ನಿರ್ದೇಶಕರಾದ ಜುನೆಲ್ ಸಯಾನೋ ಅವರು ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು.   

ಬೆಂಗಳೂರು: ರಾಜ್ಯದಲ್ಲಿ ಭತ್ತದ ತಳಿಗಳ ಸಂಶೋಧನೆ ಮತ್ತು ಸಂವರ್ಧನೆಗೆ ನೆರವು ಪಡೆಯುವ ಉದ್ದೇಶದಿಂದ ಫಿಲಿಪ್ಪೀನ್ಸ್‌ನ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದೊಂದಿಗೆ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿದೆ.

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಫಿಲಿಪ್ಪೀನ್ಸ್‌ನ ಮನಿಲಾದಲ್ಲಿರುವ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಒಡಂಬಡಿಕೆಗೆ ಸಹಿ ಮಾಡಲಾಗಿದೆ.

ರಾಜ್ಯದಲ್ಲಿ ನೆರೆ ಹಾವಳಿ, ಬರ ಪರಿಸ್ಥಿತಿ, ಕರಾವಳಿ, ಮಲೆನಾಡು, ಬಯಲು ಸೀಮೆಯ ವಿಭಿನ್ನ ಭೌಗೋಳಿಕ ಪರಿಸರಕ್ಕೆ ಹೊಂದಾಣಿಕೆಯಾಗುವ ವಿವಿಧ ಜೈವಿಕ, ಅಜೈವಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು, ಪೌಷ್ಟಕಾಂಶವುಳ್ಳ, ಅಧಿಕ ಇಳುವರಿ ತರುವ ಬೇಸಾಯ ಕ್ರಮಗಳು ಮತ್ತು ಭತ್ತದ ತಳಿಗಳ ಸಂಶೋಧನೆಗೆ ಈ ಒಡಂಬಡಿಕೆಗೆ ನೆರವಾಗಲಿದೆ ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

ADVERTISEMENT

ಕರ್ನಾಟಕದಲ್ಲಿಯೂ ಅಂತರರಾಷ್ಟ್ರೀಯ ಮಟ್ಟದ ಭತ್ತ ಸಂಶೋಧನಾ ಕೇಂದ್ರ ಸ್ಥಾಪನೆ ಬಗ್ಗೆಯೂ ಸಚಿವರು ಸಮಾಲೋಚನೆ ನಡೆಸಿದರು.

ಭತ್ತದ ಮಹತ್ವ, ಉಭಯ ದೇಶಗಳು ಅನುಸರಿಸುತ್ತಿರುವ ಬೇಸಾಯ ಕ್ರಮಗಳು, ಮೌಲ್ಯವರ್ಧನೆಗೆ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಮಾಹಿತಿ ಹಾಗೂ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಭತ್ತದ ತಳಿಗಳ ಸಂರಕ್ಷಣೆ, ಸಂಶೋಧನೆಗೆ ಕರ್ನಾಟಕ ಸರ್ಕಾರ ತೋರುತ್ತಿರುವ ಕಾಳಜಿ ಮತ್ತು ರೈತಪರ ಯೋಜನೆಗಳ ಬಗ್ಗೆ ಫಿಲಿಪ್ಪೀನ್ಸ್‌ನ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದರು. 1945ರಿಂದಲೂ ಭಾರತ ಮತ್ತು ಫಿಲಿಪ್ಪೀನ್ಸ್‌ ನಡುವೆ ಇರುವ ಬಾಂಧವ್ಯ, ಕೃಷಿ ಕ್ಷೇತ್ರದ ಸಹಕಾರವನ್ನು ಅಲ್ಲಿನ ಅಧಿಕಾರಿಗಳು ನೆನಪಿಸಿಕೊಂಡರು.

ಸಚಿವ ಚಲುವರಾಯಸ್ವಾಮಿ ಅವರು ಅಧಿಕಾರಿಗಳ ತಂಡದೊಂದಿಗೆ ಭತ್ತ ಸಂಶೋಧನಾ ಕೇಂದ್ರದ ಜೀನ್‌ ಬ್ಯಾಂಕ್‌ ಒಳಗೊಂಡಂತೆ ವಿವಿಧ ಪ್ರಯೋಗಾಯಲಗಳು ಮತ್ತು ತಾಕುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.