ADVERTISEMENT

₹ 2.5 ಲಕ್ಷ ಮೌಲ್ಯದ ತರಕಾರಿ ಖರೀದಿಸಿ, ಬಡವರಿಗೆ ಹಂಚಿದ ಸಂಸದೆ ಸುಮಲತಾ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 11:29 IST
Last Updated 16 ಏಪ್ರಿಲ್ 2020, 11:29 IST
ಸಂಸದೆ ಎ.ಸುಮಲತಾ ಗುರುವಾರ ಮಳವಳ್ಳಿಯಲ್ಲಿ ಬಡವರಿಗೆ ಆಹಾರ ಸಾಮಗ್ರಿ ವಿತರಣೆ ಮಾಡಿದರು
ಸಂಸದೆ ಎ.ಸುಮಲತಾ ಗುರುವಾರ ಮಳವಳ್ಳಿಯಲ್ಲಿ ಬಡವರಿಗೆ ಆಹಾರ ಸಾಮಗ್ರಿ ವಿತರಣೆ ಮಾಡಿದರು   

ಮಂಡ್ಯ: ಸಂಸದೆ ಎ.ಸುಮಲತಾ ಹಾಗೂ ಅವರ ಬೆಂಬಲಿಗರು ರೈತರಿಂದ ನೇರವಾಗಿ ₹ 2.5 ಲಕ್ಷ ಮೌಲ್ಯದ ಹಣ್ಣು, ತರಕಾರಿ ಖರೀದಿ ಮಾಡಿದ್ದು ಗುರುವಾರ ನಿಯಂತ್ರಿತ ವಲಯಗಳ ನಿವಾಸಿಗಳು ಹಾಗೂ ಬಡ ಕಾರ್ಮಿಕರಿಗೆ ವಿತರಣೆ ಮಾಡಿದರು.

ನಗರದ ಸ್ವರ್ಣಸಂದ್ರ ಬಡಾವಣೆ, ಮಳವಳ್ಳಿಯ ಈದ್ಗಾ ಮೊಹಲ್ಲಾ, ಕೋಟೆ ಬೀದಿಗೆ ಭೇಟಿ ನೀಡಿ ಜನರಿಗೆ ಹಣ್ಣು, ತರಕಾರಿ ವಿತರಣೆ ಮಾಡಿ ಧೈರ್ಯ ತುಂಬಿದರು. ಬಡವರಿಗಾಗಿ 5 ಟನ್‌ ದೊಣಮೆಣಸಿನಕಾಯಿ, 10 ಟನ್‌ ಕುಂಬಳಕಾಯಿ, 15 ಟನ್‌ ಎಲೆ ಕೋಸು, 15 ಟನ್‌ ಕಲ್ಲಂಗಡಿ ಹಣ್ಣು ಖರೀದಿ ಮಾಡಲಾಗಿದೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.

ಮತ್ತೆ 50 ಟನ್‌ ಎಲೆ ಕೋಸು, 50 ಟನ್‌ ಟೊಮೆಟೊ, 50 ಟನ್‌ ಬಾಳೆಹಣ್ಣು ಖರೀದಿ ಮಾಡಿ ಬಡವರಿಗೆ ವಿತರಣೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಸಂಸದರ ನಿಧಿಗೆ ತಡೆ: ‘ದೇಶದಲ್ಲಿ ಕೊರೊನಾ ಸೋಂಕಿನಿಂದಾಗಿ ತುರ್ತು ಪರಿಸ್ಥಿತಿ ವಾತಾವರಣ ಇದೆ. ಹೀಗಾಗಿ ದೇಶದ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ತಡೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದ ನಂತರ ನಿಧಿ ಸಂಸದರಿಗೆ ದೊರೆಯುತ್ತದೆ. ಆಗ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.