ಬೆಂಗಳೂರು: ‘ಮಾವು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ನೆರವಿಗೆ ಧಾವಿಸಬೇಕೆಂಬ ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ (ಎಂಐಎಸ್) ಪ್ರತಿ ಕ್ವಿಂಟಲ್‌ಗೆ ₹ 1616 ಬೆಲೆ ನಿಗದಿಪಡಿಸಿದೆ. ಗುರುವಾರ ಅಥವಾ ಶುಕ್ರವಾರದಿಂದ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಈ ಯೋಜನೆಯಡಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯಲ್ಲಿ ಒಂದು ತಿಂಗಳು ಖರೀದಿ ಪ್ರಕ್ರಿಯೆ ನಡೆಯಲಿದೆ. ಒಬ್ಬ ಬೆಳೆಗಾರರಿಂದ ಪ್ರತಿ ಎಕರೆಗೆ 20 ಕ್ವಿಂಟಲ್‌ನಂತೆ ಎರಡು ಹೆಕ್ಟೇರ್ ಮಾವು ಇಲ್ಲವೇ ಗರಿಷ್ಠ 100 ಕ್ವಿಂಟಲ್ ಮಾವು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಬೆಳೆಗಾರರಿಗೆ ₹ 40 ಸಾವಿರವರೆಗೆ ನೆರವು ಸಿಗುವ ನಿರೀಕ್ಷೆ ಇದೆ. ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ (ಪಿಡಿಪಿಎಸ್) ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೇ 50:50ರ ಅನುಪಾತದಲ್ಲಿ ಈ ವ್ಯತ್ಯಾಸ ದರವನ್ನು ಭರಿಸಲಿವೆ’ ಎಂದರು.
‘2.50 ಲಕ್ಷ ಟನ್ ಮಾವು ಖರೀದಿಗೆ ಒಟ್ಟು ₹ 101 ಕೋಟಿ ಭರಿಸಬೇಕಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ₹ 50 ಕೋಟಿ ಹೊಂದಿಸಲಿವೆ’ ಎಂದರು.
‘ಸಹಕಾರ, ಎಪಿಎಂಸಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಖರೀದಿ ಪ್ರಕ್ರಿಯೆ ನಡೆಯಲಿದೆ. 2024-25 ಸಾಲಿಗೆ ಬೆಳೆ ಸಮೀಕ್ಷೆಯಲ್ಲಿ ರೈತರು ಎಫ್‌ಐಡಿ ಮೂಲಕ ಮಾವು ಬೆಳೆದಿರುವ ಬಗ್ಗೆ ನೋಂದಣಿ ಮಾಡಿಕೊಂಡಿರುವುದು ಕಡ್ಡಾಯ. ಆ ಬೆಳೆಗಾರರಿಗಷ್ಟೇ ಸೌಲಭ್ಯ ಸಿಗಲಿದೆ’ ಎಂದೂ ತಿಳಿಸಿದರು.
‘ಘೋಷಿತ ಪ್ರದೇಶದ ಎಪಿಎಂಸಿ ಮಾರುಕಟ್ಟೆ, ಉಪ ಮಾರುಕಟ್ಟೆ, ನೇರ ಖರೀದಿ ಕೇಂದ್ರ ಹಾಗೂ ಸಂಸ್ಕರಣಾ ಘಟಕಗಳಲ್ಲಿ ರೈತರಿಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ತಂತ್ರಾಂಶ ಕೂಡ ಸಿದ್ಧವಾಗಿದ್ದು, ರೈತರು ಆಧಾರ್ ಹಾಗೂ ಎಫ್‌ಐಡಿ ವಿವರ ನೀಡಿದರೆ ತಕ್ಷಣವೇ ನಿರ್ದಿಷ್ಟ ಸರ್ವೆ ಸಂಖ್ಯೆಯಲ್ಲಿನ ಭೂಮಿಯಲ್ಲಿ ಬೆಳೆದಿರುವ ಮಾವಿನ ವಿವರ ಲಭ್ಯವಾಗಲಿದೆ. ರೈತರು ನೋಂದಣಿ ರಸೀದಿ, ವರ್ತಕರಿಗೆ ಮಾರಾಟ ಮಾಡಿದ ರಸೀದಿ, ವೇ ಬ್ರಿಡ್ಜ್ ರಸೀದಿಯನ್ನು ಖರೀದಿ ಅಧಿಕಾರಿಗೆ ನೀಡುವುದು ಕಡ್ಡಾಯ. ಅರ್ಹ ಬೆಳೆಗಾರರಿಗೆ ವ್ಯತ್ಯಾಸ ಮೊತ್ತ ಡಿಬಿಟಿ ಮೂಲಕ ರವಾನೆ ಆಗಲಿದೆ’ ಎಂದರು.
‘2.50 ಲಕ್ಷ ಟನ್ ಮಾವು ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಗತ್ಯಬಿದ್ದರೆ ಮತ್ತೆ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ನೆರವು ಪಡೆಯಲು ಪ್ರಯತ್ನಿಸಲಾಗುವುದು’ ಎಂದೂ ತಿಳಿಸಿದರು.
‘ಮಾರುಕಟ್ಟೆ ದರ ಹೆಚ್ಚಿದರೆ ಖರೀದಿ ಸ್ಥಗಿತ’
‘ಸದ್ಯ ತೋತಾಪುರಿ ಮಾವಿನ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ ₹500ರಿಂದ ₹600ವರೆಗೆ ಮಾರಾಟವಾಗುತ್ತಿದ್ದು, ಕೇಂದ್ರ ಸರ್ಕಾರ ಗರಿಷ್ಠ ₹1,616 ನಿಗದಿಪಡಿಸಿದೆ. ಮಾರುಕಟ್ಟೆಯಲ್ಲಿ ದರ ₹1,616ಗಿಂತ ಹೆಚ್ಚಾದರೆ ಖರೀದಿ ಸ್ಥಗಿತ ವಾಗಲಿದೆ’ ಎಂದು ಚಲುವರಾಯಸ್ವಾಮಿ ತಿಳಿಸಿದರು. ‘ಎಂಐಎಸ್ ಹಾಗೂ ಸದ್ಯದ ಮಾರುಕಟ್ಟೆ ಧಾರಣೆಯು ಶೇ 25ರ ಮಿತಿಗೆ ಒಳಪಟ್ಟಿರಬೇಕೆಂಬ ನಿಯಮ ವಿಧಿಸಲಾಗಿದೆ. ಮಾವಿಗೆ ಮೂಲ ಬೆಲೆ ₹1,200 ನಿಗದಿಪಡಿಸ ಲಾಗಿದೆ. ಕೇಂದ್ರ ಸರ್ಕಾರವು ಮಾರುಕಟ್ಟೆ ಮಧ್ಯ ಪ್ರವೇಶದ ಮೂಲಕ ₹416 ವ್ಯತ್ಯಾಸ ಮೊತ್ತನ್ನು ರೈತರಿಗೆ ಪಾವತಿಸಲಿದೆ. ಆ ಮೊತ್ತ ದಲ್ಲಿ ಅರ್ಧದಷ್ಟನ್ನು ರಾಜ್ಯ ಸರ್ಕಾರ ಭರಿಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.