ADVERTISEMENT

ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗಕ್ಕಿಲ್ಲ ಅಧ್ಯಕ್ಷರ ಭಾಗ್ಯ!

ಹೆಸರಿಗಷ್ಟೇ ಆಯೊಗ l ಒಂದೂವರೆ ವರ್ಷದಿಂದ ಅಧ್ಯಕ್ಷ, ಸದಸ್ಯ ಹುದ್ದೆ ಖಾಲಿ

ಓದೇಶ ಸಕಲೇಶಪುರ
Published 31 ಜುಲೈ 2025, 3:06 IST
Last Updated 31 ಜುಲೈ 2025, 3:06 IST
   

ರಾಮನಗರ: ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮದ (ಎಂ.ಎಸ್ ಕಾಯ್ದೆ–2013) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸ್ಥಾಪಿಸಿರುವ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ಒಂದೂವರೆ ವರ್ಷದಿಂದ ಅಧ್ಯಕ್ಷರು ಹಾಗೂ ಸದಸ್ಯರ ಭಾಗ್ಯವಿಲ್ಲವಾಗಿದೆ.

ಫೆಬ್ರುವರಿಯಲ್ಲಿ ಆಯೋಗದ ಅಧ್ಯಕ್ಷರನ್ನಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಕಾಂಗ್ರೆಸ್‌ ಮುಖಂಡರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸವಿತಾ ರಘು ಅವರನ್ನು ಸರ್ಕಾರ ಎರಡು ವರ್ಷದ ಅವಧಿಗೆ ನೇಮಿಸಿತ್ತು. ಆದರೆ, ಅವರು ಅಧಿಕಾರ ವಹಿಸಿಕೊಳ್ಳಲಿಲ್ಲ. ಹೀಗಾಗಿ, ಸಮಾಜ ಕಲ್ಯಾಣ ಇಲಾಖೆ ಸಚಿವರ ಹೆಗಲಿಗೆ ಈ ಹೊಣೆ ಬಿದ್ದಿದೆ.

‘ಆಯೋಗಕ್ಕೆ ಅಧ್ಯಕ್ಷರಾಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಇದುವರೆಗೆ ಆಯೋಗದಲ್ಲಿ ಒಂದೇ ಒಂದು ಸಭೆ ನಡೆಸಿಲ್ಲ. ಯಾವ ಜಿಲ್ಲೆಗೂ ಭೇಟಿ ಮಾಡಿ ಸಫಾಯಿ ಕರ್ಮಚಾರಿಗಳು ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ಪರಿಸ್ಥಿತಿ ಪ್ರಗತಿ ಪರಿಶೀಲನೆ ನಡೆಸಿಲ್ಲ. ಕಟ್ಟಕಡೆಯ ಸಮುದಾಯದವರ ಅಳಲು ಕೇಳುವವರೇ ಇಲ್ಲವಾಗಿದೆ’ ಎಂದು ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ರಾಜ್ಯ ಸಂಚಾಲಕ ಡಾ. ಕೆ.ಬಿ. ಓಬಳೇಶ ‘ಪ್ರಜಾವಾಣಿ’ಯೊಂದಿಗೆ ಬೇಸರ ತೋಡಿಕೊಂಡರು.

ADVERTISEMENT

ಅರೆ ನ್ಯಾಯಿಕ ಅಧಿಕಾರ: ‌ಒಳಚರಂಡಿ, ಶೌಚಗುಂಡಿ ಹಾಗೂ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಲು ಆಧುನಿಕ ಯಂತ್ರೋಪಕರಣ ಬಂದಿದ್ದರೂ  ಕೈಯಿಂದಲೇ ಸ್ವಚ್ಛಗೊಳಿಸುವ ಪದ್ಧತಿ ಆಗಾಗ ಅಲ್ಲಲ್ಲಿ ವರದಿಯಾಗುತ್ತಿದೆ. ತಳ ಸಮುದಾಯಗಳಾದ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ಜಾತಿಯವರಿಂದಲೇ ನಡೆಯುವ ಇಂತಹ ಅಮಾನವೀಯ ಪದ್ಧತಿ ಮೇಲೆ ನಿಗಾ ಇಟ್ಟು, ಕಾಯ್ದೆಯಡಿ ಕೆಲಸ ಮಾಡುವ ಆಯೋಗಕ್ಕೆ ಅರೆ ನ್ಯಾಯಿಕ ಅಧಿಕಾರವಿದೆ.

ಆಯೋಗಕ್ಕೆ ಪೂರಕವಾಗಿ ಜಿಲ್ಲಾ ಮತ್ತು ಉಪ ವಿಭಾಗದ ಮಟ್ಟದಲ್ಲಿ ಸಫಾಯಿ ಕರ್ಮಚಾರಿಗಳ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ ಅನುಷ್ಠಾನಕ್ಕೆ ಸಂಬಂಧಿಸಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗಳಿವೆ. ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಯುತ್ತದೆ.

ಬಿಬಿಎಂಪಿಯಲ್ಲೇ ಹೆಚ್ಚು

ಆಯೋಗದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಮ್ಯಾನ್‌ಹೋಲ್‌, ಶೌಚಗುಂಡಿ ಹಾಗೂ ಒಳಚರಂಡಿಗೆ ಇಳಿದು ಸ್ವಚ್ಛಗೊಳಿಸುವವರು (ಮ್ಯಾನುವಲ್‌ ಸ್ಕ್ಯಾವೆಂಜರ್‌) 7,483 ಮಂದಿ ಇದ್ದಾರೆ.

ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು 1,625 ಮಂದಿ ಇದ್ದಾರೆ. ಉಳಿದಂತೆ ಮೈಸೂರು ಜಿಲ್ಲೆಯಲ್ಲಿ 1,381 ಹಾಗೂ ಕೋಲಾರದಲ್ಲಿ 1,224 ಜನರಿದ್ದಾರೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಇವರ ಸಂಖ್ಯೆ ಶೂನ್ಯ. ಬೀದರ್, ಕೊಪ್ಪಳ ಹಾಗೂ ಚಿಕ್ಕಮಗಳೂರಿನಲ್ಲಿ ತಲಾ ಇಬ್ಬರಷ್ಟೇ ಇದ್ದಾರೆ ಎನ್ನುತ್ತವೆ ಆಯೋಗದ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.