ADVERTISEMENT

ಅ.24 ರಿಂದ ’ಮಾತಾಡ್‌ ಮಾತಾಡ್ ಕನ್ನಡ’; ಕನ್ನಡಕ್ಕಾಗಿ ನಾವು ಅಭಿಯಾನ

ದೇಶ–ವಿದೇಶಗಳಲ್ಲೂ ಮೊಳಗಲಿದೆ ಕನ್ನಡ ಗೀತೆಗಳು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 8:55 IST
Last Updated 19 ಅಕ್ಟೋಬರ್ 2021, 8:55 IST
   

ಬೆಂಗಳೂರು:ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಚೇರಿ, ಉದ್ಯಮ, ಅಂಗಡಿ ಮುಂಗಟ್ಟು, ಮನೆ– ಮನೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಸಂಪೂರ್ಣ ಕನ್ನಡದಲ್ಲಿ ಮಾತನಾಡುವ, ಬರೆಯುವ ಹಬ್ಬದ ರೀತಿಯಲ್ಲಿ ‘ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ.

ಇದಕ್ಕಾಗಿ ‘ಮಾತಾಡ್‌ ಮಾತಾಡ್‌ ಕನ್ನಡ’ ಅಡಿ ಟಿಪ್ಪಣಿಯ ಲಾಂಛನವನ್ನೂ ಬಿಡುಗಡೆ ಮಾಡಲಾಗಿದ್ದು, ಅ. 24 ರಿಂದ 30 ರವರೆಗೆ ರಾಜ್ಯದಲ್ಲಿ ಇರುವ ಕನ್ನಡಿಗರು, ಕನ್ನಡೇತರ ಭಾಷಿಕರು ಪ್ರೀತಿ ಮತ್ತು ಅಭಿಮಾನದಿಂದ ಕನ್ನಡದಲ್ಲಿ ಮಾತನಾಡಬೇಕು. ನವೆಂಬರ್‌ ಕೊನೆಯವರೆಗೂ ಅದು ಮುಂದುವರಿಸಬೇಕು. ಆದರೆ, ಇದು ಕಡ್ಡಾಯ ಅಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಅಭಿಯಾನದ ಸಂದರ್ಭದಲ್ಲಿ ಎಲ್ಲರೂ ಕನ್ನಡದಲ್ಲೇ ಮಾತನಾಡುವುದು, ಕನ್ನಡದಲ್ಲೇ ವ್ಯವಹರಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಕನ್ನಡವನ್ನೇ ಬಳಸುವುದು, ಕನ್ನಡೇತರರಿಗೆ ಕನ್ನಡ ಕಲಿಸುವುದು, ಕನ್ನಡದಲ್ಲೇ ಸಹಿ ಮಾಡುವುದು, ಐಟಿ–ಬಿಟಿ ಕಂಪನಿಗಳಲ್ಲಿ ಕನ್ನಡದಲ್ಲೇ ಮಾತನಾಡುವುದು ಮತ್ತು ಎಲ್ಲ ಮಾಧ್ಯಮಗಳಲ್ಲಿಯೂ ಸರಿಯಾದ ಕನ್ನಡವನ್ನೇ ಬಳಸುವ ಮೂಲಕ ಕನ್ನಡ ಹಬ್ಬದ ವಾತಾವರಣ ಸೃಷ್ಟಿಸೋಣ ಎಂದು ಅವರು ಹೇಳಿದರು.

ADVERTISEMENT

ಭಾಷೆ, ಸಂಸ್ಕೃತಿ, ಉಡುಗೆ ತೊಡುಗೆ ಮೂಲಕ ವ್ಯಕ್ತಿ ಮತ್ತು ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಇದರಿಂದ ಭಾಷೆಯ ಮಹತ್ವವೂ ಗೊತ್ತಾಗುತ್ತದೆ. ಜಾಗತೀಕರಣದ ಪರಿಣಾಮ ನೆಲದ ಭಾಷೆ ಹಿಂದಕ್ಕೆ ಸರಿದು ಅನ್ಯ ಭಾಷೆ ಮುನ್ನೆಲೆಗೆ ಬಂದಿದೆ. ಇದನ್ನು ಯುವ ಪೀಳಿಗೆಗೆ ತಿಳಿಸಬೇಕು ಎಂಬ ಉದ್ದೇಶದಿಂದಲೇ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲ ವ್ಯಕ್ತಿಗಳಿಗೂ ಮತ್ತು ಮನೆಗಳಿಗೂ ಕನ್ನಡ ಭಾಷೆಯ ಮಹತ್ವ ತಿಳಿಸುವುದೇ ನಮ್ಮ ಗುರಿಯಾಗಿದೆ ಎಂದು ಅವರು ವಿವರಿಸಿದರು.

ಒಂದು ವಾರ ಕಾಲ ಇಂಗ್ಲಿಷ್‌ ಮತ್ತು ಇತರ ಭಾಷೆಗಳ ಬಳಕೆ ಕಡಿಮೆ ಮಾಡಿ ಹೆಚ್ಚು ಹೆಚ್ಚು ಕನ್ನಡದಲ್ಲೇ ಮಾತನಾಡಲು ಪ್ರಯತ್ನಿಸಬೇಕು. ಈ ಅಭಿಯಾನಕ್ಕೆ 24 ರಂದು ಚಾಲನೆ ನೀಡಲಾಗುವುದು. ಕರ್ನಾಟಕದಲ್ಲಿ ನೆಲೆಸಿರುವ ಹೊರ ರಾಜ್ಯಗಳ ಜನರು ಒಂದು ವಾರದಲ್ಲಿ 100 ಕನ್ನಡ ವಾಕ್ಯಗಳನ್ನು ಕಲಿಯುವ ಮೂಲಕ ಕನ್ನಡದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.