ADVERTISEMENT

ಪಾಲಿಕೆ ನೈರ್ಮಲ್ಯ ನಿರೀಕ್ಷಕನಿಗೆ ₹1 ಕೋಟಿ ದಂಡ, 4 ವರ್ಷ ಸಜೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 14:13 IST
Last Updated 14 ಅಕ್ಟೋಬರ್ 2022, 14:13 IST
ಶಿವಾನಂದ ಕೊಂಡಗುಳಿ
ಶಿವಾನಂದ ಕೊಂಡಗುಳಿ   

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ನೈರ್ಮಲ್ಯ ನಿರೀಕ್ಷಕ ಶಿವಲಿಂಗ ಕೊಂಡಗುಳಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ ಸಾಬೀತಾಗಿದ್ದು, ಅವರಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯವು ನಾಲ್ಕು ವರ್ಷ ಸಜೆ ಹಾಗೂ ₹ 1 ಕೋಟಿ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ದಂಡ ಕಟ್ಟಲು ಶಿವಾನಂದ ಕೊಂಡಗುಳಿ ವಿಫಲನಾದರೆ ಮತ್ತೆ ಒಂದು ವರ್ಷ ಸಾದಾ ಸಜೆ ಅನುಭವಿಸಬೇಕು ಎಂದು ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ತೀರ್ಪಿನಲ್ಲಿ ಹೇಳಿದ್ದಾರೆ.

ಶಿವಲಿಂಗ ಕೊಂಡಕುಳಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮೂಲಗಳು ನೀಡಿದ ಮಾಹಿತಿ ಆಧರಿಸಿ ಲೋಕಾಯುಕ್ತ ಪೊಲೀಸರು 2013ರ ಫೆ. 15ರಂದು1988ರ ಲಂಚ ವಿರೋಧಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಪಂಪ್‌ವೆಲ್‌ ಬಳಿ ನಲಪಾಡ್‌ ರೆಸಿಡೆನ್ಸಿ ವಸಿ ಸಮುಚ್ಚಯದಲ್ಲಿ ಶಿವಲಿಂಗ ಕೊಂಡಕುಳಿ ಹೆಸರಿನಲ್ಲಿ ಹಾಗೂ ತಂದೆಯ ಹೆಸರಿನಲ್ಲಿ ಎರಡು ಫ್ಲ್ಯಾಟ್‌ಗಳಿದ್ದವು.

ADVERTISEMENT

‘ಪಾಲಿಕೆಯಲ್ಲಿ ಕರ್ತವ್ಯ ನಿರತರಾಗಿದ್ದ ಶಿವಲಿಂಗ ಕೊಂಡಗುಳಿಯನ್ನು ನ್ಯಾಯಾಲಯದ ಆದೇಶ ಪ್ರಕಟವಾದ ಬಳಿಕ ಬಂಧಿಸಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಅವರು ಆದಾಯಕ್ಕಿಂತ ಶೇ 237.5ರಷ್ಟು ಹೆಚ್ಚು ಆಸ್ತಿ ಹೊಂದಿರುವುದು ತನಿಖೆಯಲ್ಲಿ ಸಾಬೀತಾಗಿತ್ತು’ ಎಂದು ಜಿಲ್ಲಾ ಲೊಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಿಗಣೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್ ಶೇಟ್ ಅವರು ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆ ಪರವಾಗಿ ವಕೀಲ ರವೀಂದ್ರ ಮುನ್ನಿಪಾಡಿ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.