ADVERTISEMENT

ಕನ್ನಡದ ಸಮಗ್ರ ಅಭಿವೃದ್ಧಿ ಮಸೂದೆ ವಿಚಾರವಾಗಿ ವ್ಯಾಪಕ ಚರ್ಚೆ ಅಗತ್ಯ: ಸಿಎಂ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 7:42 IST
Last Updated 6 ಜನವರಿ 2023, 7:42 IST
   

ಹಾವೇರಿ: ‘ಕನ್ನಡದ ಸಮಗ್ರ ಅಭಿವೃದ್ಧಿ ಕುರಿತ ಮಸೂದೆಯು ಅವಸರದಲ್ಲಿ ಮಾಡುವ ಕೆಲಸವಲ್ಲ. ಅದರ ಬಗ್ಗೆ ವಿಧಾನಸೌಧದ ಒಳಗೆ, ಹೊರಗೆ, ಸಾಹಿತ್ಯ ವಲಯ ಹಾಗೂ ಸಾರ್ವಜನಿಕವಾಗಿ ವ್ಯಾಪಕ ಚರ್ಚೆಯಾಗಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಮಸೂದೆಗೆ ಸಂಬಂಧಿಸಿದಂತೆ ಕಾನೂನು ಆಯೋಗ ತನ್ನ ಅಭಿಪ್ರಾಯ ನೀಡಿದೆ. ಇದರಲ್ಲಿ ಸಾಹಿತ್ಯಾತ್ಮಕ ಅಂಶಗಳು ಸೇರಿದಂತೆ ಹಲವು ವಿಷಯಗಳನ್ನು ಸೇರಿಸಬೇಕಿದೆ. ಆನಂತರ, ಮಸೂದೆ ಸಿದ್ದಪಡಿಸಿ ಮಂಡಿಸಬೇಕಾಗುತ್ತದೆ’ ಎಂದರು.

‘ನಮ್ಮೂರಿನಲ್ಲಿ ಸಮ್ಮೇಳನ ನಡೆಯುತ್ತಿರುವುದು ಖುಷಿಯಾಗಿದೆ. ಹಾವೇರಿ ಜ್ಞಾನ ಮತ್ತು ಸಾಹಿತ್ಯದ ಬೀಡು. ಇಂತಹ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ ಮಾಡಿದರೆ ಕನ್ನಡದ ಅಸ್ಮಿತೆ ಎತ್ತಿ ಹಿಡಿದಂತಾಗುತ್ತದೆ. ಪ್ರಚಲಿತ ವಿಷಯಗಳು, ಸಮಸ್ಯೆಗಳ ಚರ್ಚೆ ಹಾಗೂ ಪರಿಹಾರದ ಜೊತೆಗೆ, ಭವಿಷ್ಯದಲ್ಲಿ ಕನ್ನಡ ಯಾವ ಮಟ್ಟಕ್ಕೆ ಹೋಗಬೇಕು ಎನ್ನುವುದಕ್ಕೆ ಸಮ್ಮೇಳನ ಮುನ್ನುಡಿ ಬರೆಯಲಿದೆ’ ಎಂದರು.

ADVERTISEMENT

‘ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಸಂಬಂಧಿಸಿದಂತೆ, ಅವರ ಉಯಿಲು ಆಧರಿಸಿಯೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಈ ಕುರಿತು ಜ್ಞಾನ ಯೋಗಾಶ್ರಮದ ಟ್ರಸ್ಟ್ ತೆಗೆದುಕೊಳ್ಳುವ ನಿರ್ಣಯಕ್ಕೆ ಸರ್ಕಾರ ಬದ್ಧವಾಗಿರಲಿದೆ’ ಎಂದು ಹೇಳಿದರು.

‘ನಾಡು–ನುಡಿಗೆ ಸಂಬಂಧಿಸಿದಂತೆ ಇಂದು ಏನಾದರೂ ಮಹತ್ವದ ಘೋಷಣೆ ಮಾಡುತ್ತೀರಾ?’ ಎಂಬ ಪ್ರಶ್ನೆಗೆ, ‘ಸರ್ಕಾರ ಈಗಾಗಲೇ ಗಡಿನಾಡು ಕನ್ನಡಿಗರ ಅಭಿವೃದ್ಧಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದು, ಸಮ್ಮೇಳನದ ಸಮಾರೋಪ ಸಮಾರಂಭದವರೆಗೆ ಕಾಯಿರಿ’ ಎಂದು ಪ್ರತಿಕ್ರಿಯಿಸಿದರು.

ವಿಧಾನಸೌಧದಲ್ಲಿ ಪೊಲೀಸರು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಒಬ್ಬರಿಂದ ₹10 ಲಕ್ಷ ನಗದು ಜಪ್ತಿ ಮಾಡಿ, ಬಂಧಿಸಿರುವ ಪ್ರಕರಣ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.