ಸಾಂದರ್ಭಿಕ ಚಿತ್ರ
ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಗುರುವಾರ ಬೆಳಿಗ್ಗೆ 10ರ ನಂತರ ಅವಕಾಶ ನಿರಾಕರಿಸಿದ್ದರಿಂದ ನೂರಾರು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾದರು.
ಕೋರ್ಸ್‌ಗಳು ಹಾಗೂ ಕಾಲೇಜುಗಳ ಆಯ್ಕೆ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆ.22ರ ಬೆಳಿಗ್ಗೆ 10ರವರೆಗೆ ಅವಕಾಶ ನೀಡಿತ್ತು. ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ನೋಂದಾಯಿತ ಮೊಬೈಲ್‌ಗಳಿಗೆ ವಾಟ್ಸ್ ಆ್ಯಪ್ ಸಂದೇಶ ರವಾನಿಸುವ ವ್ಯವಸ್ಥೆ ಆರಂಭಿಸಲಾಗಿತ್ತು. ಆದರೆ, ಹಲವರಿಗೆ ಬೆಳಿಗ್ಗೆ 10ಕ್ಕೆ ಸಮಯ ಕೊನೆಯಾಗುವ ಮಾಹಿತಿ ಲಭ್ಯವಾಗಿರಲಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ಹಾಗೂ ಅವರ ಜೊತೆಗೆ ಬಂದಿದ್ದ ಪೋಷಕರು ಪರದಾಡಿದರು.
‘ಆ.20ರಿಂದ 22ರವರೆಗೆ ಅವಕಾಶ ನೀಡಲಾಗಿತ್ತು. ಸಾಮಾನ್ಯವಾಗಿ ಕೊನೆಯ ದಿನದ ಸಂಜೆ 5ರವರೆಗೂ ಕಚೇರಿ ಕಾರ್ಯನಿರ್ವಹಿಸುವ ಕಾರಣ ಬಹಳಷ್ಟು ವಿದ್ಯಾರ್ಥಿಗಳು 10 ಗಂಟೆಗೆ ಮಲ್ಲೇಶ್ವರ ಕೆಇಎ ಕಚೇರಿಗೆ ಬಂದೆವು. ಆದರೆ, ಬೆಳಿಗ್ಗೆ 10ಕ್ಕೆ ಕೊನೆಯಾಗಿದೆ ಎಂದು ಮಾಹಿತಿ ತಿಳಿದು ಆತಂಕಕ್ಕೆ ಒಳಗಾದೆವು. ವಿದ್ಯಾರ್ಥಿಗಳ ಅಹವಾಲು ಆಲಿಸಿದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಎಲ್ಲರಿಗೂ ಅವಕಾಶ ನೀಡಿದರು’ ಎಂದು ವಿದ್ಯಾರ್ಥಿ ಪೋಷಕರಾದ ಅನಿಲ್‌ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಆ.25ರ ರಾತ್ರಿ 8ಕ್ಕೆ ಎರಡನೇ ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ನಂತರ ಆಗಸ್ಟ್ 27ರ ಬೆಳಿಗ್ಗೆ 11ರವರೆಗೆ ಇಚ್ಛೆಗಳನ್ನು ಬದಲಿಸಿಕೊಳ್ಳಬಹುದು. ಸೆ.1ರಂದು ಸಂಜೆ 6ಕ್ಕೆ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಶುಲ್ಕದ ಮಾಹಿತಿ ಆಧರಿಸಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕೆಇಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.