ADVERTISEMENT

ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್‌ ಶುಲ್ಕ: ಶೇಕಡ 10ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 5:20 IST
Last Updated 25 ಸೆಪ್ಟೆಂಬರ್ 2022, 5:20 IST
   

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್‌ (ಎಂಬಿಬಿಎಸ್‌)ಶುಲ್ಕವನ್ನು ಶೇ10ರಷ್ಟುಹೆಚ್ಚಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಹೀಗಾಗಿ, ಎಂಬಿಬಿಎಸ್‌ ಪದವಿ ಪ್ರವೇಶ ವಿದ್ಯಾರ್ಥಿಗಳಿಗೆ ದುಬಾರಿ ಆಗಲಿದೆ.

‘ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಪ್ರತಿ ನಿಧಿಗಳ ಜೊತೆ ಶುಕ್ರವಾರ ನಡೆಸಿದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಶೇ10ರಷ್ಟುಶುಲ್ಕಹೆಚ್ಚಳದಿಂದಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಈ ವರ್ಷ ಹೆಚ್ಚುವರಿಯಾಗಿ ₹12,884 ಪಾವತಿಸಬೇಕಾಗಿದೆ. ಇದರಿಂದಾಗಿ, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್‌ ಕೋರ್ಸ್‌ಗೆ ಪ್ರತಿವರ್ಷ ₹ 1,41,630ಶುಲ್ಕಕಟ್ಟಬೇಕಿದೆ. ಸದ್ಯ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್‌ ಕೋರ್ಸ್‌ಗೆ ₹ 1,28,746 ಶುಲ್ಕವಿದೆ.

ADVERTISEMENT

‘2021–22ನೇ ಸಾಲಿನಲ್ಲಿ ಶುಲ್ಕ ಹೆಚ್ಚಳ ಮಾಡಿಲ್ಲ. ಆದರೆ, ಬೋಧಕ ಸಿಬ್ಬಂದಿಯ ವೇತನ ಹೆಚ್ಚಿಸಲಾಗಿದೆ. ಹೀಗಾಗಿ, ವೈದ್ಯಕೀಯ ಕಾಲೇಜುಗಳನ್ನು ನಡೆಸುವುದು ಕಷ್ಟಕರವಾಗಿದ್ದು, ಶೇ 15ರಷ್ಟು ಶುಲ್ಕ ಹೆಚ್ಚಿಸಲೇ ಬೇಕು’ ಎಂದು ಸರ್ಕಾರ ಮುಂದೆ ಆಡಳಿತ ಮಂಡಳಿಗಳು ಬೇಡಿಕೆ ಇಟ್ಟಿದ್ದವು. ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡ ಸರ್ಕಾರ, ಶೇ 10ರಷ್ಟು ಹೆಚ್ಚಿಸಲು ಒಪ್ಪಿಗೆ ನೀಡಿದೆ.

‘ಕೋವಿಡ್‌ ಕಾರಣದಿಂದ ಕಳೆದ ವರ್ಷ ಶುಲ್ಕ ಹೆಚ್ಚಿಸಲು ಸರ್ಕಾರ ಅವಕಾಶ ನೀಡಿಲ್ಲ. ಮಾನವೀಯ ದೃಷ್ಟಿಯಿಂದ ನಾವು ಕೂಡಾ ಅದಕ್ಕೆ ಒಪ್ಪಿದ್ದೆವು. ಈ ಬಾರಿ ಶೇ 15ರಷ್ಟು ಹೆಚ್ಚಿಸುವಂತೆ ಆಗ್ರಹಿಸಿದ್ದೆವು’ ಎಂದು ಖಾಸಗಿ ವೈದ್ಯಕೀಯ ಕಾಲೇಜಿನ ಪ್ರತಿನಿಧಿಯೊಬ್ಬರು ಹೇಳಿದರು. ಶುಲ್ಕ ಹೆಚ್ಚಳ ಒಪ್ಪಂದಕ್ಕೆ ಸೋಮವಾರ ಸಹಿ ಮಾಡಿದ ಬಳಿಕ ಮುಖ್ಯಮಂತ್ರಿ ಅಥವಾ ವೈದ್ಯಕೀಯ ಸಚಿವರು ಶುಲ್ಕ ಹೆಚ್ಚಳವನ್ನು ಘೋಷಿಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಸರ್ಕಾರಿ ವೈದ್ಯಕೀಯ ಕಾಲೇಜಿಗಳಲ್ಲಿ ಕಳೆದ ವರ್ಷದಂತೆ ₹ 59,800 ಶುಲ್ಕ ಮುಂದುವರಿಯಲಿದೆ. 2018–19ರಲ್ಲಿ ಸರ್ಕಾರಿ ಕಾಲೇಜುಗಳಲ್ಲಿನ ಶುಲ್ಕವನ್ನು ₹ 16,700ರಿಂದ ₹ 59,800ಕ್ಕೆ ಹೆಚ್ಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.