ADVERTISEMENT

ವೈದ್ಯಕೀಯ ಉಪಕರಣ ಖರೀದಿ: ‍ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹ

ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 21:18 IST
Last Updated 27 ಜುಲೈ 2020, 21:18 IST
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್   

ಬೆಂಗಳೂರು: ‘ವೈದ್ಯಕೀಯ ಉಪಕರಣಗಳ ಖರೀದಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು. ವೈದ್ಯಕೀಯ ಉಪಕರಣಗಳನ್ನು ಕೇಂದ್ರ, ಅಕ್ಕಪಕ್ಕದ ರಾಜ್ಯಗಳು ಹಾಗೂ ರಾಜ್ಯ ಸರ್ಕಾರ ಖರೀದಿಸಿರುವ ಮೊತ್ತಗಳ ತುಲನೆ ಮಾಡಿ ವರದಿ ಪ್ರಕಟಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ಅದರ ಬಗ್ಗೆ ರಾಜ್ಯದಾದ್ಯಂತ ಬೆಳಕು ಚೆಲ್ಲುತ್ತೇವೆ. ಸರ್ಕಾರದ ಭ್ರಷ್ಟಾಚಾರ ಹಾಗೂ ವೈಫಲ್ಯದ ಕುರಿತು ಇದೇ 30ರಿಂದ ಆಗಸ್ಟ್‌ 2ರ ವರೆಗೆ ಎಲ್ಲ ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜನರಿಗೆ ಮಾಹಿತಿ ತಲುಪಿಸುತ್ತೇವೆ. ಈ ವಿಚಾರದಲ್ಲಿ ಜನರ ಮಧ್ಯೆ ಹೋಗುತ್ತಿದ್ದು, ಜನತಾ ನ್ಯಾಯಾಲಯವೇ ನೋಡಿಕೊಳ್ಳಲಿದೆ’ ಎಂದರು.

‘ನಮ್ಮ ಸರ್ಕಾರವನ್ನು ಶೇ 10 ಕಮಿಷನ್‌ ಸರ್ಕಾರ ಎಂದು ನರೇಂದ್ರ ಮೋದಿ ಹೇಳಿದ್ದರು. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಬಿಜೆಪಿ ಸಚಿವರು ತಮ್ಮ ಇಲಾಖೆಯಲ್ಲಿ ಮಾಡಿರುವ ಭ್ರಷ್ಟಾಚಾರ ಶೇ 200, ಶೇ 300, ಶೇ 400 ರಷ್ಟು ತಲುಪಿದೆ. ಇದಕ್ಕೇನು ಹೇಳುತ್ತೀರಾ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ನಾಲ್ಕು ತಿಂಗಳ ಖರ್ಚು ವೆಚ್ಚದ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಕೇಳುವುದು ತಪ್ಪೇ. ನೀವು ಮಾಡಿದ ಭ್ರಷ್ಟಾಚಾರಕ್ಕೆ ಲೆಕ್ಕ ಕೊಡಿ, ಉತ್ತರ ಕೊಡಿ ಎಂದು ಪ್ರಶ್ನಿಸುವುದು ತಪ್ಪೇ. ಸಹಕಾರ ಕೊಡಿ ಎಂದು ಕೇಳುವ ನಿಮಗೆ ನಾಚಿಕೆಯಾಗುವುದಿಲ್ಲವೇ. ನಿಮ್ಮ ಭ್ರಷ್ಟಾಚಾರಕ್ಕೆ ನಾವು ಸಹಕಾರ ನೀಡಬೇಕೇ’ ಎಂದು ಅವರು ಕೇಳಿದರು.

‘ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಎಲ್ಲ ವರ್ಗದ ಜನರಿಗೆ ಸಹಾಯ ಮಾಡಿದ್ದೇವೆ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ.
₹1,600 ಕೋಟಿ ಘೋಷಣೆಯಲ್ಲಿ ಯಾರಿಗೆ ಎಷ್ಟು ತಲುಪಿದೆ ಎಂಬ ಬಗ್ಗೆ ಪಟ್ಟಿ ಕೊಡಿ. ಜನರು ಸತ್ತ ಮೇಲೆ ಹಣ ಕೊಡುತ್ತೀರಾ’ಎಂದು ಅವರು ಪ್ರಶ್ನಿಸಿದರು.

ಸೂತಕದ ಮನೆಯಲ್ಲಿ ಸಂಭ್ರಮ: ಕಿಡಿ

‘ಮೊದಲ ತಿಂಗಳು ಮಂತ್ರಿಮಂಡಲವಿಲ್ಲದೇ ತಿಕ್ಕಾಟ, ಎರಡನೇ ತಿಂಗಳು ನೆರೆ ಪರಿಹಾರ ಇಲ್ಲದೇ ನರಳಾಟ, ಮೂರನೇ ತಿಂಗಳು ಉಪಚುನಾವಣೆ ಬಯಲಾಟ, ನಾಲ್ಕನೇ ತಿಂಗಳು ಮಂತ್ರಿಮಂಡಲ ರಚನೆಯ ನಾಟಕ, ಐದನೇ ತಿಂಗಳು ಮಂತ್ರಿಗಿರಿಗಾಗಿ ಕಿತ್ತಾಟ, ಏಳು-ಎಂಟನೇ ತಿಂಗಳಲ್ಲಿ ಕೋವಿಡ್- ಲಾಕ್‌ಡೌನ್ ಎಂಬ ಅಲೆದಾಟ, ಒಂಬತ್ತು- ಹತ್ತರಲ್ಲಿ ಕೊರೊನಾ ಕೊರೊನಾ ಕಿರುಚಾಟ, ಹನ್ನೊಂದು-ಹನ್ನೆರಡರಲ್ಲಿ ಲೂಟಿಯ ಆಟ– ಇದು ಬಿಜೆಪಿ ಸರ್ಕಾರದ ಸಾಧನೆ’ ಎಂದು ಡಿ.ಕೆ.ಶಿವಕುಮಾರ್‌ ಲೇವಡಿ ಮಾಡಿದರು. ‘ಸೂತಕದ ಮನೆಯಲ್ಲಿ ಬಿಜೆಪಿ ಸರ್ಕಾರ ಸಂಭ್ರಮಾಚರಣೆ ಮಾಡುತ್ತಿದೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.