ಬೆಂಗಳೂರು: ಪ್ರಸಕ್ತ ಸಾಲಿಗೆ (2025–26) ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ 400 ವೈದ್ಯಕೀಯ ಸೀಟುಗಳನ್ನು ಇತ್ತೀಚೆಗೆ ಮಂಜೂರು ಮಾಡಿದ್ದ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ), ಇದೀಗ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ ಒಟ್ಟು 600 ಸೀಟುಗಳನ್ನು ಮಂಜೂರು ಮಾಡಿದೆ.
‘ರಾಜ್ಯದ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ ಮಂಜೂರು ಆಗಿರುವ ವೈದ್ಯಕೀಯ ಸೀಟುಗಳನ್ನು ಎರಡನೇ ಸುತ್ತಿನಲ್ಲಿ ಹಂಚಿಕೆ ಮಾಡಲಾಗುವುದು’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ನೀಟ್ ಫಲಿತಾಂಶದ ನಂತರ ಪ್ರಕಟಿಸಿದ್ದ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ 9,263 ಸೀಟುಗಳು ಲಭ್ಯವಿದ್ದವು. ಹೆಚ್ಚುವರಿ ಸೀಟುಗಳ ಕಾರಣದಿಂದ ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಒಟ್ಟು ಸಂಖ್ಯೆ 10,263ಕ್ಕೆ ಏರಿಕೆ ಆಗಿದೆ.
ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ ಮಂಜೂರು ಮಾಡಿದ ಸೀಟುಗಳ ವಿವರವನ್ನು ಎನ್‌ಎಂಸಿ ಅಧ್ಯಕ್ಷ ಎಂ.ಕೆ. ರಮೇಶ್ ಅವರು ಪ್ರಕಟಿಸಿದ್ದಾರೆ.
ರಾಜ್ಯದ ಎಂಟು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 50 ಸೀಟುಗಳ ಹೆಚ್ಚಳಕ್ಕೆ ಮೊದಲು ಅನುಮತಿ ನೀಡಿತ್ತು. ಇದೀಗ ಪ್ರಸಕ್ತ ಸಾಲಿನಲ್ಲಿ ಆರಂಭಗೊಂಡ ಫಾರೂಕ್ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಷನ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ದೇವನಹಳ್ಳಿಯಲ್ಲಿರುವ ಆಕಾಶ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್‌ಗೆ ತಲಾ 100 ಮತ್ತು ಇತರೆ ಎಂಟು ಕಾಲೇಜುಗಳಿಗೆ ತಲಾ 50 ರಂತೆ ಸೀಟು ಹೆಚ್ಚಳಕ್ಕೆ ಅನುಮತಿ ನೀಡಿದೆ.
ಬಿಜಿಎಸ್ (ನಗರೂರು), ಡಾ. ಚಂದ್ರಮ್ಮ ದಯಾನಂದ ಸಾಗರ್, ಈಸ್ಟ್ ಪಾಯಿಂಟ್, ಜೆಜಿಎಂಎಂಎಂಸಿ (ಹುಬ್ಬಳ್ಳಿ), ಪಿಇಎಸ್, ಬಿ.ಎಂ. ಪಾಟೀಲ (ವಿಜಯಪುರ), ಶ್ರೀದೇವಿ ಮತ್ತು ಸಿದ್ದಗಂಗಾ (ತುಮಕೂರು) ಈ ಎಂಟು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ತಲಾ 50 ಸೀಟುಗಳನ್ನು ಹೆಚ್ಚುವರಿಯಾಗಿ ಎನ್‌ಎಂಸಿ ಮಂಜೂರು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.