ಪ್ರಾತಿನಿಧಿಕ ಚಿತ್ರ
ಲಂಡನ್: ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಶ್ರಮಿಸಬೇಕಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೇ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹಾಗೂ ಬ್ರಿಟನ್ ಜತೆಯಾಗಿ, ಈ ಕುರಿತು ಆಳವಾದ ಅಧ್ಯಯನ ಕೈಗೊಳ್ಳಲು ಕರ್ನಾಟಕದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲು ಮುಂದಾಗಿವೆ.
ಲಂಡನ್ ಪ್ರವಾಸದಲ್ಲಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಮನೋರೋಗ ಮತ್ತು ಮಾನಸಿಕ ಆರೋಗ್ಯ ವಿಭಾಗದ ಡಾ.ರಾಜೀವ್, ಡಾ.ರಶ್ಮಿ ಪಟೇಲ್, ಡಾ.ಬೆನ್ ಮತ್ತು ಡಾ.ಟೋನಿ ಅವರು ಈ ಕುರಿತು ಸುದೀರ್ಘ ಮಾತುಕತೆ ನಡೆಸಿ, ನಿರ್ಧಾರ ತೆಗೆದುಕೊಂಡಿದ್ದಾರೆ.
ಖಿನ್ನತೆ, ಆರೋಗ್ಯ ಸಮಸ್ಯೆ, ಚಟಗಳ ಗೀಳು, ಸಾಲ ಮತ್ತಿತರ ಕಾರಣಗಳಿಂದ ವಿಶ್ವದಲ್ಲಿ ಪ್ರತಿ ವರ್ಷ 10 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ತಡೆಯಬೇಕಾದ, ಚಿಕಿತ್ಸೆ ನೀಡಬೇಕಾದ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದ ಸಿಬ್ಬಂದಿ, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಒಂದು ದಶಕದ ಅವಧಿಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಬ್ರಿಟನ್, ಭಾರತ ಸೇರಿದಂತೆ ಬಹುತೇಕ ದೇಶಗಳಲ್ಲಿ ಸಾಮಾನ್ಯ ಪಿಡುಗಾಗು ತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎರಡೂ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಅಧ್ಯಯನ ಆರಂಭಿಸುತ್ತಿವೆ.
ಸಂಶೋಧನಾ ಕೇಂದ್ರದಲ್ಲಿ ಆತ್ಮಹತ್ಯೆಗೆ ಕಾರಣಗಳನ್ನು ಅಧ್ಯಯನ ಮಾಡುವ ಜತೆಗೆ, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಶುಶ್ರೂಷ ಅಧಿಕಾರಿಗಳು, ನರ್ಸಿಂಗ್ ವಿದ್ಯಾರ್ಥಿ ಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಮಾದಕ ದ್ರವ್ಯ, ಕುಡಿತದ ಚಟಕ್ಕೆ ಅಂಟಿಕೊಳ್ಳುವುದನ್ನು ತಪ್ಪಿಸಲು ಸೂಕ್ತ ಮಾರ್ಗದರ್ಶನ ನೀಡುವುದು. ಭವಿಷ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಸೂಕ್ತ ತರಬೇತಿ, ತಪಾಸಣೆ, ಚಿಕಿತ್ಸಾ ಶಿಫಾರಸುಗಳನ್ನು ಮಾಡಲಾಗುತ್ತದೆ. ಈ ಕುರಿತು ಪ್ರತ್ಯೇಕ ಕೋರ್ಸ್ಗಳನ್ನು ಅಳಡಿಸುವ ಚಿಂತನೆ ನಡೆಸಿದರು.
ಸರ್ಕಾರಿ ಶಾಲೆ ದತ್ತು ಪಡೆಯಲು ನಿರ್ಧಾರ
ಕರ್ನಾಟಕದಲ್ಲಿನ ಸರ್ಕಾರಿ ಶಾಲಾ-ಕಾಲೇಜುಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಬ್ರಿಟನ್‌ನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಘೋಷಿಸಿದರು.
ವೋಲ್ವರ್ ಹ್ಯಾಂಟನ್ ನಗರದಲ್ಲಿ ನೆಲೆಸಿರುವ ಕನ್ನಡಿಗರ ಜತೆ ಡಾ.ಎಂ.ಸಿ.ಸುಧಾಕರ್, ಡಾ.ಶರಣ ಪ್ರಕಾಶ ಪಾಟೀಲ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ನಿರ್ಧಾರ ಮಾಡಿದರು.
ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ ಗಳಲ್ಲಿ ಕರ್ನಾಟಕ ನಿಗದಿ ಪಡಿಸಿರುವ ಎನ್‌ಆರ್‌ಐ ಕೋಟಾಗಳನ್ನು ಸದುಪಯೋಗ ಪಡಿಸಿಕೊಳ್ಳು ವುದು, ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ಕನ್ನಡದ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಳ ಮಾಡಲು ಶ್ರಮಿಸುವ ಭರವಸೆ ನೀಡಿದರು.
ಕರ್ನಾಟಕದಲ್ಲೇ ಪರೀಕ್ಷೆ: ಮನವಿ
ಬ್ರಿಟನ್‌ನಲ್ಲಿ ವಿದ್ಯಾಭ್ಯಾಸ ಮಾಡಲು ಆಸಕ್ತಿ ಹೊಂದಿರುವ ಭಾರತದ ವೈದ್ಯಕೀಯ ಪದವೀಧರರಿಗೆ ಕರ್ನಾಟಕ ದಲ್ಲೇ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ (ಎಂಆರ್ ಸಿಪಿ) ಪರೀಕ್ಷೆ ನಡೆಸುವಂತೆ ಸಚಿವ ಶರಣ ಪ್ರಕಾಶ ಪಾಟೀಲ ಪ್ರಸ್ತಾವ ಸಲ್ಲಿಸಿದರು.
ಎಂಆರ್ ಸಿಪಿ ಪರೀಕ್ಷೆ ಯನ್ನು ಬ್ರಿಟನ್‌ನ ಫೆಡರೇಷನ್ ಆಫ್ ದ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ನಡೆಸುತ್ತದೆ ಹಾಗೂ ಬ್ರಿಟಿಷ್ ಅಸೋಸಿ ಯೇಷನ್ ಆಫ್ ಫಿಸಿಷಿಯನ್ಸ್ ಆಫ್ ಇಂಡಿಯನ್ ಒರಿಜಿನ್ ತರಬೇತಿ ನೀಡುತ್ತದೆ.
ಈ ಕುರಿತು ಮಾತನಾಡಿದ ಪಾಟೀಲ, ‘ಈಗಿರುವ ವ್ಯವಸ್ಥೆ ಯಲ್ಲಿ ಕರ್ನಾಟಕದ ಹೆಚ್ಚಿನ ವೈದ್ಯಕೀಯ ಪದವೀಧರರು, ಸ್ನಾತಕೋತ್ತರ ಪದವಿಗಾಗಿ ಎಂಆರ್ ಸಿಪಿ ಪರೀಕ್ಷೆ ಸಿದ್ಧತೆ, ಪರೀಕ್ಷೆ ಬರೆಯಲು ಭಾರತ ದಿಂದ ಬ್ರಿಟನ್‌ಗೆ ಬರುತ್ತಾರೆ. ಕರ್ನಾಟಕದಲ್ಲೂ ಪರೀಕ್ಷೆ ನಡೆದರೆ ಅವರಿಗೆ ಅನುಕೂಲ ವಾಗುತ್ತದೆ’ ಎಂದರು.
ಆತ್ಮಹತ್ಯೆ ಪ್ರಕರಣಗಳ ಕುರಿತ ಸಂಶೋಧನೆಗಾಗಿ ಕರ್ನಾಟಕ- ಬ್ರಿಟನ್ ಸಹಯೋಗದಲ್ಲಿ ಬೆಂಗಳೂರು ಸಮೀಪದ ಭೀಮನಕುಪ್ಪೆಯಲ್ಲಿ ಕೇಂದ್ರ ಸ್ಥಾಪಿಸಲಾಗುವುದು.ಬಿ.ಸಿ.ಭಗವಾನ್, ಕುಲಪತಿ, ರಾಜೀವ್ ಗಾಂಧಿ ವೈದ್ಯಕೀಯ ವಿ.ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.