ADVERTISEMENT

ಸದಲಗಾ ಪಿಎಸ್‌ಐ ಅಮಾನತು

ಸಿಆರ್‌ಪಿಎಫ್‌ ಯೋಧಗೆ ವೈದ್ಯಕೀಯ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 17:44 IST
Last Updated 29 ಏಪ್ರಿಲ್ 2020, 17:44 IST

ಬೆಳಗಾವಿ: ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಿಆರ್‌ಪಿಎಫ್ ಯೋಧನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ತಾಲ್ಲೂಕು ಸದಲಗಾ ಪೊಲೀಸ್ ಠಾಣೆಯ ಪಿಎಸ್ಐ ಅನಿಲ ಕಂಬಾರ ಅವರನ್ನು ವಿಚಾರಣೆ ಕಾಯ್ದಿರಿಸಿ ಬುಧವಾರ ಅಮಾನತು ಮಾಡಲಾಗಿದೆ.

‘ದುರ್ನಡತೆ ಹಾಗೂ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಪಿಎಸ್‌ಐ ಅಮಾನತು ಮಾಡಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಖಚಿತಪಡಿಸಿದ್ದಾರೆ.

ರಜೆಯ ಮೇಲೆ ಊರಿನಲ್ಲಿದ್ದ ಸಚಿನ್, ಏ. 23ರಂದು ಮನೆಯ ಎದುರು ಬೈಕ್ ತೊಳೆಯುತ್ತಿದ್ದಾಗ ಮಾಸ್ಕ್ ಧರಿಸಿರಲಿಲ್ಲ ಎನ್ನುವ ಕಾರಣಕ್ಕೆ ಇಬ್ಬರು ಕಾನ್‌ಸ್ಟೆಬಲ್‌ಗಳು ಪ್ರಶ್ನಿಸಿದ್ದರು. ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದರು. ಅಂದೇ ಯೋಧನನ್ನು ಬಂಧಿಸಿದ್ದ ಪೊಲೀಸರು, ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಿದ್ದರು. ‘ಲಾಕ್‌ಡೌನ್‌ ಉಲ್ಲಂಘನೆ ಹಾಗೂ ಪೊಲೀಸ್ ಕಾನ್‌ಸ್ಟೆಬಲ್‌ಗಳ ಮೇಲೆ ಹಲ್ಲೆ ನಡೆಸಿದರು’ ಎನ್ನುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.

ADVERTISEMENT

‘ಈ ವೇಳೆ ಯೋಧನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಹಾಗೂ ಹಿಂಸಿಸಲಾಗಿದೆ. ಕೈಗೆ ಕೋಳ ತೊಡಿಸಿ ನೆಲದ ಮೇಲೆ ಕೂಡಿಸಿ ಅವಮಾನಿಸಲಾಗಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಫೋಟೊ ಕೂಡ ವೈರಲ್‌ ಆಗಿತ್ತು.

ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸಿಆರ್‌ಪಿಎಫ್‌ ಅಧಿಕಾರಿಗಳು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಆದೇಶಿಸಿದ್ದರು.

ಪ್ರಕರಣದ ತನಿಖೆ ಮುಂದುವರಿದಿದೆ.

ಈ ನಡುವೆ, ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಸಚಿನ್ ಅವರನ್ನು ಸಿಆರ್‌ಪಿಎಫ್‌ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗಾಗಿ ಬುಧವಾರ ಇಲ್ಲಿನ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು.

ಖಾನಾಪುರ ತಾಲ್ಲೂಕು ಜಾಂಬೋಟಿಯ ತರಬೇತಿ ಕೇಂದ್ರದಿಂದ ಕರೆ ತಂದು ತಪಾಸಣೆ ಮಾಡಿಸಲಾಯಿತು. ‘ತಪಾಸಣೆ ಮಾಡಿಸಿ ಅವರನ್ನು ಕರೆದೊಯ್ಯಲಾಗಿದೆ’ ಎಂದು ಬಿಮ್ಸ್‌ ನಿರ್ದೇಶಕ ಡಾ.ವಿನಯ್‌ ದಾಸ್ತಿಕೊಪ್ಪ ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

ಈ ನಡುವೆ, ‘ಪೊಲೀಸರು ವಿಚಾರಣೆ ನೆಪದಲ್ಲಿ ಸಚಿನ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಅವರ ವೃಷ್ಟದ ಭಾಗದಲ್ಲಿ ಬಾಸುಂಡೆಗಳು ಬಂದಿವೆ. ಪೊಲೀಸರು ಇಷ್ಟೊಂದು ಕೆಟ್ಟದಾಗಿ ನಡೆಸಿಕೊಂಡಿರುವುದು ಖಂಡನೀಯ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಪೋಸ್ಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ಗಾಯಗಳಾಗಿರುವ ಮತ್ತಷ್ಟು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.