ADVERTISEMENT

ಕೋವಿಡ್‌ ಹರಡುವಿಕೆಗೆ ಕಾರಣವಾಗುವ ಸಾಧ್ಯತೆ: ‘ಕೈ’ ಪಾದಯಾತ್ರೆ ಮೇಲೆ ತೀವ್ರ ನಿಗಾ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 20:12 IST
Last Updated 9 ಜನವರಿ 2022, 20:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಆರಂಭಿಸಿರುವ ಪಾದಯಾತ್ರೆಯ ಮೇಲೆ ತೀವ್ರ ನಿಗಾ ಇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡವರಲ್ಲಿ ಕೋವಿಡ್‌ ಹರಡಿದರೆ ಬಿಗಿಯಾದ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ.

ರಾಮನಗರ ಜಿಲ್ಲೆಯ ಕನಕ‍ಪುರ ತಾಲ್ಲೂಕಿನ ಮೇಕೆದಾಟುವಿನ ಸಂಗಮದಲ್ಲಿ ಕಾಂಗ್ರೆಸ್‌ ನಾಯಕರಿಂದ ಪಾದಯಾತ್ರೆ ಆರಂಭವಾದ ಬೆನ್ನಲ್ಲೇ ತಮ್ಮ ನಿವಾಸದಲ್ಲಿ ಸಚಿವರು ಮತ್ತು ಶಾಸಕರ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಚರ್ಚಿಸಿದರು. ಕಾಂಗ್ರೆಸ್‌ನ ಪಾದಯಾತ್ರೆ, ಮೇಕೆದಾಟು ಯೋಜನೆ, ಬೆಂಗಳೂರು ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿರುವ ಕುರಿತು ದೀರ್ಘ ಸಮಾಲೋಚನೆ ನಡೆಸಿದರು.

ಕಾಂಗ್ರೆಸ್‌ ಪಾದಯಾತ್ರೆಯಿಂದ ಆಗಬಹುದಾದ ರಾಜಕೀಯ ಪರಿಣಾಮಗಳ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ನಡೆದಿರುವ ಬೆಳವಣಿಗೆಗಳ ಬಗ್ಗೆ ನಿರಂತರವಾಗಿ ಹೇಳಿಕೆ ನೀಡುವ ಮೂಲಕ ಪ್ರತಿಪಕ್ಷದ ಆರೋಪಗಳಿಗೆ ತಿರುಗೇಟು ನೀಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆರಂಭದಿಂದ ಈವರೆಗೆ ನಡೆದಿರುವ ಎಲ್ಲ ಪ್ರಯತ್ನಗಳ ಕುರಿತು ಸಾರ್ವಜನಿಕರ ಜತೆ ಮಾಹಿತಿ ಹಂಚಿಕೊಳ್ಳುವಂತೆ ಸಚಿವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಜಲ ಸಂಪನ್ಮೂಲ ಇಲಾಖೆ ಸಿದ್ಧಪಡಿಸಿರುವ ಮಾಹಿತಿಯ ಟಿಪ್ಪಣಿಯನ್ನು ಸಭೆಯಲ್ಲಿದ್ದ ಸಚಿವರ ಜತೆಗೆ ಹಂಚಿಕೊಳ್ಳಲಾಗಿದೆ ಎಂಬ ಮಾಹಿತಿ ಲಭಿಸಿದೆ.

ನಿಗಾ ಇಡಲು ಸೂಚನೆ: ಪಾದಯಾತ್ರೆಯ ಮೇಲೆ ತೀವ್ರ ನಿಗಾ ಇಡಬೇಕು. ಪಾದಯಾತ್ರೆ ಕೋವಿಡ್‌ ಹರಡಲು ಕಾರಣವಾಗುವ ಸಾಧ್ಯತೆ ಇದೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ವರದಿ ಮಾಡುವಂತೆ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಪಾದಯಾತ್ರೆಯಲ್ಲಿ ಭಾಗಿಯಾದವರಲ್ಲಿ ಹೆಚ್ಚು ಮಂದಿಯಲ್ಲಿ ಸೋಂಕು ಹರಡುವ ಸಾಧ್ಯತೆ ಇದ್ದಲ್ಲಿ ಕಠಿಣ ನಿರ್ಬಂಧ ವಿಧಿಸುವ ಕುರಿತು ಯೋಚಿಸಬೇಕು ಎಂಬ ತೀರ್ಮಾನವನ್ನು ಸಭೆಯಲ್ಲಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ವೇಗವಾಗಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಕಾಂಗ್ರೆಸ್‌ನ ಪಾದಯಾತ್ರೆ ನಗರ ಪ್ರವೇಶಿಸಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು ಎಂದು ಕೆಲವು ಸಚಿವರು ಮತ್ತು ಶಾಸಕರು ಸಭೆಯಲ್ಲಿ ಆತಂಕ ಹೊರಹಾಕಿದ್ದಾರೆ. ಕೋವಿಡ್‌ ಪ್ರಮಾಣ ಗಣನೀಯವಾಗಿ ಏರಿಕೆಯಾದರೆ ಪಾದಯಾತ್ರೆ ನಗರ ಪ್ರವೇಶಿಸದಂತೆ ನಿರ್ಬಂಧ ವಿಧಿಸಬೇಕು ಎಂಬ ಬೇಡಿಕೆಯನ್ನೂ ಕೆಲವು ಮುಂದಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

‘ನಿರಂತರವಾಗಿ ಪರಿಸ್ಥಿತಿ ಅವಲೋಕನಕ್ಕೆ ನಿರ್ಧರಿಸಲಾಗಿದೆ. ಪಾದಯಾತ್ರೆಯಿಂದ ಕೋವಿಡ್‌ ಹರಡುವ ಸಾಧ್ಯತೆ ಕಂಡುಬಂದಲ್ಲಿ ಕಠಿಣ ಕ್ರಮ ಅನಿವಾರ್ಯ ಆಗಬಹುದು ಎಂಬ ತೀರ್ಮಾನಕ್ಕೆ ಬರಲಾಗಿದೆ. ನಗರದಲ್ಲಿ ಕೋವಿಡ್‌ ಹರಡುವುದಕ್ಕೆ ಕಾರಣವಾಗುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬ ಸಲಹೆಗೆ ಸಹಮತ ವ್ಯಕ್ತವಾಗಿದೆ. ಕಾದು ನೋಡಿ ತೀರ್ಮಾನಕ್ಕೆ ಬರಲಾಗುವುದು’ ಎಂದು ಸಚಿವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಚಿವರಾದ ಡಾ.ಸಿಎನ್‌. ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಡಾ.ಕೆ. ಸುಧಾಕರ್‌, ಬೈರತಿ ಬಸವರಾಜ, ಎಸ್‌.ಟಿ. ಸೋಮಶೇಖರ್‌ ಮತ್ತು ಹಲವು ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲಿ ಕಟ್ಟೆಚ್ಚರಕ್ಕೆ ತೀರ್ಮಾನ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬರುತ್ತಿರುವ ಕುರಿತೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಒಂದೆರಡು ದಿನಗಳ ಕಾಲ ಕಾದುನೋಡಿ, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ ಬೆಂಗಳೂರಿನಲ್ಲಿ ಮತ್ತಷ್ಟು ಬಿಗಿಯಾದ ನಿರ್ಬಂಧಗಳನ್ನು ಜಾರಿಗೊಳಿಸುವ ಕುರಿತು ಭಾನುವಾರದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.