ADVERTISEMENT

ಮುಟ್ಟಿನ ರಜೆಗೆ ತಕರಾರು: ಆಕ್ಷೇಪಣೆ ಸಲ್ಲಿಸಿದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 16:18 IST
Last Updated 10 ಡಿಸೆಂಬರ್ 2025, 16:18 IST
<div class="paragraphs"><p>ಕರ್ನಾಟಕ ಹೈಕೋರ್ಟ್</p></div>

ಕರ್ನಾಟಕ ಹೈಕೋರ್ಟ್

   

ಬೆಂಗಳೂರು: ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ಸೌಲಭ್ಯ ಒದಗಿಸುವುದನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದೆ.

ಸರ್ಕಾರದ ಆದೇಶ ಪ್ರಶ್ನಿಸಿ, ‘ಬೆಂಗಳೂರು ಹೋಟೆಲ್‌ಗಳ ಸಂಘ’ದ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಮತ್ತಿತರರು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು‌.

ADVERTISEMENT

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಮಹಿಳೆಯರ ಆರೋಗ್ಯದ ಹಿತ ಕಾಯುವುದಕ್ಕಾಗಿ ನೀತಿ ರೂಪಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಸಂವಿಧಾನದಲ್ಲೂ ಈ ಬಗ್ಗೆ ನಿರ್ದೇಶನಗಳಿವೆ’ ಎಂದು ನ್ಯಾಯಪೀಠಕ್ಕೆ ಅರುಹಿದರು.

ಸರ್ಕಾರದ ಆಕ್ಷೇಪಣೆಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು 2026ರ ಜನವರಿ 21ಕ್ಕೆ ಮುಂದೂಡಲಾಗಿದೆ.

ಅರ್ಜಿದಾರರ ತಕರಾರು ಏನು?

‘ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ಮಟ್ಟಿಗೆ ವೇತನ ಸಹಿತ ಮುಟ್ಟಿನ ರಜೆ ಒದಗಿಸಬೇಕು’ ಎಂದು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಅಧಿಸೂಚನೆ ಹೊರಡಿಸಿತ್ತು. ‘ಇದು ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದ್ದು ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.